×
Ad

ತಿಂಗಳ ಅಂತ್ಯದೊಳಗೆ ಒಳಮೀಸಲಾತಿ ಖಚಿತ : ಎಚ್.ಆಂಜನೇಯ ವಿಶ್ವಾಸ

Update: 2025-08-07 20:38 IST

ಎಚ್. ಆಂಜನೇಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆ ಮಾದಿಗ ಸಮುದಾಯವು ಸೇರಿದಂತೆ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಸಿಹಿಸುದ್ದಿಯ ಸೂಚನೆ ನೀಡಿದ್ದು, ಈ ತಿಂಗಳಾಂತ್ಯದೊಳಗೆ ಒಳಮೀಸಲಾತಿ ಜಾರಿಗೊಳ್ಳಲಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಎಚ್.ಆಂಜನೇಯ, ದೇಶದಲ್ಲಿಯೇ ಪ್ರಥಮ ಬಾರಿಗೆ ಅತ್ಯಂತ ವೈಜ್ಞಾನಿಕವಾಗಿ ಜಾತಿಗಣತಿ ಸಮೀಕ್ಷೆ ನಡೆಸಿದ ನ್ಯಾ.ನಾಗಮೋಹನ್ ದಾಸ್ ಆಯೋಗದ ಕಾರ್ಯ ಶ್ಲಾಘನೀಯ. 60 ದಿನಗಳ ಕಾಲ, ರಾಜ್ಯದ 1 ಕೋಟಿ 7ಲಕ್ಷ ಜನರನ್ನು ಸಮೀಕ್ಷೆ ನಡೆಸಿ, ಅವರವರ ಜನಸಂಖ್ಯೆ, ಹಿಂದುಳಿಯುವಿಕೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಯನ್ನು ವೈಜ್ಞಾನಿಕವಾಗಿ ದಾಖಲಿಸಿರುವುದು ಐತಿಹಾಸಿಕ ದಾಖಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಯಾರೋಬ್ಬರು ಜಾತಿಗಣತಿಯಿಂದ ಹೊರಗುಳಿಯದಂತೆ ಮನೆ-ಮನೆ ಭೇಟಿ, ಬ್ಲಾಕ್ ಮಟ್ಟ, ಆನ್‍ಲೈನ್‍ನಲ್ಲಿ ಮೂರು ರೀತಿ ನೋಂದಣಿಗೆ ಅವಕಾಶ ನೀಡುವ ಮೂಲಕ ಸಣ್ಣ ಅಪಸ್ವರಕ್ಕೂ ಅವಕಾಶ ಇಲ್ಲದಂತೆ ಸಮೀಕ್ಷೆ ನಡೆಸಲಾಗಿದ್ದು, ಇದು ಅತ್ಯಂತ ವೈಜ್ಞಾನಿಕ ವರದಿ ಎಂಬುದಕ್ಕೆ ಉದಾಹರಣೆ ಆಗಿದೆ ಎಂದು ಅವರು ತಿಳಿಸಿದ್ದಾರೆ.

ವರದಿಯ ಬಗ್ಗೆ ಅನಗತ್ಯ ಆರೋಪಗಳಿಗೆ ಆಯೋಗದ ನಡೆ, ಸಂಪುಟದ ನಿರ್ಧಾರ ಸ್ಪಷ್ಟ ಉತ್ತರ ನೀಡಿದೆ. ಸರ್ವರ ಅಭಿಪ್ರಾಯದಡಿ ಒಳಮೀಸಲಾತಿ ಜಾರಿಗೆ ದಿಟ್ಟ ನಿರ್ಧಾರ ಸಂಪುಟ ಕೈಗೊಂಡಿರುವುದು ಸ್ವಾಗತರ್ಹ. ಮುಂದಿನ(ಆ.16)ಸಂಪುಟ ಸಭೆಯಲ್ಲಿ ವರದಿಗೆ ಅಧಿಕೃತ ಒಪ್ಪಿಗೆ ಮುದ್ರೆ ನೀಡಿ, ಅಧಿವೇಶನ ಕಲಾಪದಲ್ಲಿ ಮಂಡಿಸಿ, ಬಿಲ್ ಪಾಸು ಮಾಡಿ ಕಾನೂನು ರಚಿಸಿ ರಾಜ್ಯಪಾಲರಿಗೆ ಕಳುಹಿಸಿ ಒಪ್ಪಿಗೆ ಪಡೆಯಬೇಕು.

ಈ ಎಲ್ಲ ಪ್ರಕ್ರಿಯೆಗಳು ಆಗಸ್ಟ್ ತಿಂಗಳಲ್ಲಿಯೇ ಪೂರ್ಣಗೊಂಡು ಮಾದಿಗ ಸಮುದಾಯಕ್ಕೆ ಮೀಸಲಾತಿ ಸ್ವಾತಂತ್ರ್ಯ ನೀಡಬೇಕು. ಈ ನಿಟ್ಟಿನಲ್ಲಿ ಸಾಮಾಜಿಕ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯರ ಬದ್ಧತೆ ಪ್ರಶ್ನಾತೀತವಾಗಿದ್ದು, ದಿಟ್ಟ ನಡೆ ಕೈಗೊಳ್ಳುವುದು ಖಚಿತ ಎಂದು ಆಂಜನೇಯ ಭರವಸೆ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News