ಮಂಗಳೂರಿನಲ್ಲಿ ವಿಶೇಷ ಆನೆ ಕಾರ್ಯಪಡೆ ಘಟಕ ಆರಂಭ : ಈಶ್ವರ್ ಖಂಡ್ರೆ
ಬೆಂಗಳೂರು, ಆ.14: ವನ್ಯಜೀವಿ ಮತ್ತು ಮಾನವ ಸಂಘರ್ಷವನ್ನು ನಿಯಂತ್ರಿಸಲು ಮಂಗಳೂರಿನಲ್ಲಿಯೂ ವಿಶೇಷ ಆನೆ ಕಾರ್ಯಪಡೆ (ಎಲಿಫೆಂಟ್ ಟಾಸ್ಕ್ ಫೋರ್ಸ್) ಘಟಕವನ್ನು ಆರಂಭಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಯಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ 3,800 ಕಿ.ಮೀ ಉದ್ದದ ಸೌರ ಬೇಲಿ ಮತ್ತು 428 ಕಿ.ಮೀ ಉದ್ದದ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇನ್ನೂ 103 ಕಿ.ಮೀ ಬ್ಯಾರಿಕೇಡ್ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಮಂಗಳೂರು ಭಾಗದಲ್ಲಿ 300 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಅದಕ್ಕೆ ಸುಮಾರು 500 ಕೋಟಿ ರೂ. ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದರು.
ಮಾನವ-ಪ್ರಾಣಿ ಸಂಘರ್ಷಕ್ಕೆ ಕಾಡಿನ ಪ್ರದೇಶ ಕಡಿಮೆಯಾಗುತ್ತಿರುವುದು ಮತ್ತು ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿರುವುದೇ ಪ್ರಮುಖ ಕಾರಣ. ಅದರಲ್ಲೂ, ಜನರು ಕಾಡಾನೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಆದುದರಿಂದ, ಕಾಡಾನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದರು.
ಮಂಗಳೂರು ಭಾಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಾಡಾನೆಗಳ ಹಾವಳಿ ಕಡಿಮೆಯಾಗಿದೆ. ಆದಾಗ್ಯೂ, ಭವಿಷ್ಯದಲ್ಲಿ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇರುವುದರಿಂದ, ರೈಲ್ವೆ ಬ್ಯಾರಿಕೇಡ್‍ಗಳನ್ನು ಎಲ್ಲಿ ಹಾಕಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಕಾಡಾನೆಗಳು ಅರಣ್ಯದ ಹೊರಗೆ ಬರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಖಂಡ್ರೆ ತಿಳಿಸಿದರು.
ಮತ್ತೋರ್ವ ಬಿಜೆಪಿ ಸದಸ್ಯ ಸುರೇಶ್ ಎಚ್.ಕೆ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೇಲೂರು ತಾಲೂಕು ವ್ಯಾಪ್ತಿಯಲ್ಲಿ ಮಾನವ-ಕಾಡಾನೆ ಸಂಘರ್ಷ ಹೆಚ್ಚಾದರಿಂದ ಸಕಲೇಶಪುರದ ಕೇಂದ್ರಸ್ಥಾನವನ್ನು ಹೊಂದಿದ್ದ ಆನೆ ಕಾರ್ಯಪಡೆಯನ್ನು ಬೇಲೂರಿಗೆ ಸ್ಥಳಾಂತರಿಸಲಾಗಿದೆ ಎಂದರು.
ಬಿಕ್ಕೋಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಅತೀ ಹೆಚ್ಚಾಗಿದ್ದು, 9 ಸಂಖ್ಯೆ ಮಾನವ ಜೀವ ಹಾನಿ ಪ್ರಕರಣಗಳು ಮತ್ತು ಸಾಕಷ್ಟು ಬೆಳೆನಾಶ ಪ್ರಕರಣಗಳು ದಾಖಲಾಗಿದ್ದು, 50ಕ್ಕೂ ಹೆಚ್ಚು ಕಾಡಾನೆಗಳು ಬೇಲೂರು ತಾಲೂಕು, ಬಿಕ್ಕೋಡು ಭಾಗದಲ್ಲಿಯೇ ಮೊಕ್ಕಾಂ ಹೂಡಿರುತ್ತವೆ. ಆನೆ ಕಾರ್ಯಪಡೆ ಕ್ಯಾಂಪ್ ನಿರ್ಮಿಸಲು ಕೆಟಿಟಿಪಿ ಕಾಯ್ದೆಯಂತೆ ಕಾಮಗಾರಿಯನ್ನು ನಿರ್ವಹಿಸಲು ಟೆಂಡರ್ ಕಾಮಗಾರಿಯನ್ನು ಪ್ರಾರಂಭಗೊಳಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.