ಮೀಸಲಾತಿಗೂ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೂ ಸಂಬಂಧ ಇಲ್ಲ: ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು, ಆ. 30: ಮೀಸಲಾತಿಗೂ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ವೀರಶೈವ ಲಿಂಗಾಯತರು ಗಣತಿ ವೇಳೆ ನೈಜ ಮಾಹಿತಿ ನೀಡುವಂತೆ ಮನವಿ ಮಾಡಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿರ್ಧರಿಸಿದೆ ಎಂದು ಮಹಾಸಭಾದ ಹಿರಿಯ ಉಪಾಧ್ಯಕ್ಷ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಮೀಸಲಾತಿ ದೊರಕಬಹುದು ಎಂದು ತಮ್ಮ ಉಪಜಾತಿಗೆ ಸಮೀಪದ ಮತ್ತೊಂದು ಜಾತಿಯ ಹೆಸರು ಬರೆಸುತ್ತಿದ್ದಾರೆ. ಈ ಸಮೀಕ್ಷೆಯ ವರದಿ ಗೌಪ್ಯವಾಗಿದ್ದು, ಇದರಿಂದ ಜಾತಿ ಪ್ರಮಾಣ ಪತ್ರ ಲಭಿಸುವುದಿಲ್ಲ ಎಂದು ತಿಳಿಸಿದರು.
ಶುಕ್ರವಾರ(ಆ.29) ಬೆಂಗಳೂರಿನಲ್ಲಿ ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪ ಅವರ ಅನುಪಸ್ಥಿತಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿಯೇ ನಡೆದ ಸಮುದಾಯದ ಸಚಿವರು, ಶಾಸಕರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸುಳ್ಳು ಸತ್ಯ ಆಗುವುದಿಲ್ಲ: ‘ಬಿಜೆಪಿಯವರು ಧರ್ಮಸ್ಥಳ ವಿಚಾರದಲ್ಲಿ ಯಾತ್ರೆ ಮಾಡುತ್ತಾ ಸುಳ್ಳು ಆರೋಪ ಮಾಡುತ್ತಿದ್ದಾರೆ, ಸುಳ್ಳು ಎಷ್ಟೇ ಸಾರಿ ಹೇಳಿದ್ರು ಅದು ಸತ್ಯ ಆಗಲು ಸಾಧ್ಯವಿಲ್ಲ ಎಂದು ಈಶ್ವರ್ ಖಂಡ್ರೆ ತಿರುಗೇಟು ನೀಡಿದರು.
ಧರ್ಮಸ್ಥಳದ ಬಗ್ಗೆ ನಮಗೂ ಗೌರವ ಇದೆ. ನಾವೂ ಮಂಜುನಾಥನ ಭಕ್ತರೇ, ನಮಗೂ ಭಕ್ತಿ ಗೌರವ ಎಲ್ಲವೂ ಇದೆ. ಜನರ ಮನದಲ್ಲಿ ಮೂಡಿದ ಶಂಕೆ ನಿವಾರಿಸುವ ಜವಾಬ್ದಾರಿ ಹೊತ್ತ ಸರಕಾರ ನ್ಯಾಯಸಮ್ಮತವಾಗಿ ತನಿಖೆ ನಡೆಸುತ್ತಿದೆ. ಪಾರದರ್ಶಕವಾಗಿ ಎಲ್ಲ ಆಯಾಮದಲ್ಲೂ ತನಿಖೆ ನಡೆದಿದೆ. ಇಂತಹ ಸ್ಥಿತಿಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ. ನಾಟಕ ಮಾಡುವುದನ್ನು ನಿಲ್ಲಿಸಿ, ಸರಕಾರದೊಂದಿಗೆ ಸಹಕರಿಸಲಿ ಎಂದು ಈಶ್ವರ್ ಖಂಡ್ರೆ ಮನವಿ ಮಾಡಿದರು.