ಎಲ್ಲರಿಗೂ ತೃಪ್ತಿಯಾಗುವಂತೆ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ : ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ
ಬೆಂಗಳೂರು, ಸೆ.20: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಆರಂಭಿಸಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ರಾಜ್ಯದ ಎಲ್ಲ 7 ಕೋಟಿ ಜನರಿಗೂ ತೃಪ್ತಿಯಾಗುವ ರೀತಿಯಲ್ಲಿ ನಡೆಯಲಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ಪೂರ್ಣಗೊಂಡ ಬಳಿಕ, ಸಮುದಾಯಗಳ ಹಿಂದುಳಿದಿರುವಿಕೆಯನ್ನು ಗುರುತಿಸಲಾಗುವುದು. ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ, ಎಲ್ಲರ ಅಭಿಪ್ರಾಯ ಪಡೆದೇ ಸರಕಾರ ಮುಂದಡಿ ಇಡಲಿದೆ. ಇದನ್ನು ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಎಲ್ಲ ಜಾತಿ, ಜನಾಂಗದಲ್ಲೂ ಬಡವರಿದ್ದಾರೆ, ನಿರ್ಗತಿಕರಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಸರಕಾರದ ಯೋಜನೆಯ ಲಾಭ ದೊರಕಬೇಕು. ಈ ನಿಟ್ಟಿನಲ್ಲಿ ಸರಕಾರ ಶ್ರಮಿಸುತ್ತಿದೆ. ಹಿಂದುಳಿದಿರುವಿಕೆಯನ್ನು ತಿಳಿಯಲು ಮತ್ತು ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದಲೇ ಈ ಸಮೀಕ್ಷೆ ನಡೆಯುತ್ತಿದೆ. ಹೀಗಾಗಿ ಸಮಾಜದ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಬೇಕು ಮತ್ತು ವಾಸ್ತವ ಮಾಹಿತಿಯನ್ನು ದಾಖಲೀಕರಿಸಬೇಕು ಎಂದು ಅವರು ಕೋರಿದರು.
ಲಿಂಗಾಯತ-ವೀರಶೈವ ಧರ್ಮ ಎಂದು ಧರ್ಮದ ಕಾಲಂನಲ್ಲಿ ಬರೆಸಬೇಕು ಎಂಬುದು ಮಹಾಸಭಾ ನಿಲುವಾಗಿದೆ. ಆದರೆ ಪ್ರತ್ಯೇಕ ಧರ್ಮ ಎಂದು ಇನ್ನೂ ಗುರುತಿಸಿಲ್ಲ. ಹೀಗಾಗಿ ಆತ್ಮಸಾಕ್ಷಿಯಂತೆ ಮತ್ತು ವಿವೇಚನೆಗೆ ತಕ್ಕಂತೆ ಬರೆಸುವಂತೆ ಮನವಿ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.
ವೀರಶೈವ ಲಿಂಗಾಯತ ಮಹಾಸಭಾ ವಿಸರ್ಜನೆ ಮಾಡಬೇಕು ಎಂದು ಅಸಂಬದ್ಧ ಹೇಳಿಕೆ ನೀಡಿರುವವರಿಗೆ ತಾವು ಉತ್ತರ ನೀಡುವುದಿಲ್ಲ. ಅವರಿಗೆ ಯಾವುದೇ ಅಸ್ತಿತ್ವ ಇಲ್ಲ. ವೀರಶೈವ-ಲಿಂಗಾಯತ ಬೇರೆ ಬೇರೆ ಅಲ್ಲ ಒಂದೆ ಎಂಬುದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಿಲುವಾಗಿದ್ದು, ಪ್ರತ್ಯೇಕ ಧರ್ಮಕ್ಕಾಗಿ ಪ್ರಯತ್ನ ಮುಂದುವರಿಯಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಸಿದ್ದಗಂಗಾ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರೂ ವೀರಶೈವ-ಲಿಂಗಾಯತ ಒಂದೇ ಎಂದು ಪ್ರತಿಪಾದಿಸಿದ್ದರು. ನಿನ್ನೆ ಹುಬ್ಬಳ್ಳಿಯಲ್ಲಿ ಮಠಾಧಿಪತಿಗಳ ಒಕ್ಕೂಟ ಆಯೋಜಿಸಿದ್ದ ಏಕತಾ ಸಮಾವೇಶ ಸಂಪೂರ್ಣ ಯಶಸ್ವಿಯಾಗಿದೆ. ಶ್ರೀ ದಿಂಗಾಲೇಶ್ವರ ಸ್ವಾಮಿ, ಶ್ರೀ ಸಿದ್ದಲಿಂಗ ಸ್ವಾಮಿ, ಪಂಚಪೀಠದ ಪೀಠಾಧಿಪತಿಗಳು, ಸಾವಿರಾರು ಹರಚರಗುರು ಮೂರ್ತಿಗಳು ಹಾಗೂ ಸಾವಿರಾರು ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಈ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.