×
Ad

ಪ್ರತ್ಯೇಕ ಕೇಡರ್ ಸೃಷ್ಟಿಸಿ 15 ವನ್ಯಜೀವಿ ವೈದ್ಯರ ನೇಮಕ : ಸಚಿವ ಈಶ್ವರ್ ಖಂಡ್ರೆ

31 ಕೃಷ್ಣಮೃಗಗಳ ಅಸಹಜ ಮೃತ್ಯು; ಮೃಗಾಲಯಗಳ ಮುಖ್ಯಸ್ಥರೊಂದಿಗೆ ವಿಡಿಯೊ ಸಂವಾದ

Update: 2025-11-18 19:27 IST

ಈಶ್ವರ್ ಖಂಡ್ರೆ

ಬೆಂಗಳೂರು : ಮೃಗಾಲಯ ಮತ್ತು ಆನೆ ಶಿಬಿರಗಳಲ್ಲಿ ವನ್ಯಜೀವಿ ವೈದ್ಯರ ಕೊರತೆ ಇದ್ದು, ಪ್ರತ್ಯೇಕ ಕೇಡರ್ ಸೃಷ್ಟಿಸಿ ಶೀಘ್ರವೇ 15 ವನ್ಯಜೀವಿ ವೈದ್ಯರ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಬೆಳಗಾವಿ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳು ಅಸಹಜವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಒಂಬತ್ತೂ ಮೃಗಾಲಯಗಳ ಮುಖ್ಯಸ್ಥರೊಂದಿಗೆ ಮಂಗಳವಾರ ವಿಡಿಯೊ ಸಂವಾದ ಮೂಲಕ ಸಭೆ ನಡೆಸಿದ ಅವರು, ವನ್ಯಜೀವಿ ವೈದ್ಯರ ನೇಮಕ ಆಗುವವರೆಗೂ ಇರುವ ಪಶುವೈದ್ಯರಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಪ್ರಕರಣಕ್ಕೆ ರೋಗ- ಬ್ಯಾಕ್ಟೀರಿಯಾ ಸೋಂಕು ಕಾರಣವಾಗಿದೆ ಎಂದು ವೈದ್ಯರು ದೃಢಪಡಿಸಿದ್ದು, ಈ ಸೋಂಕು ಗಾಳಿಯಿಂದ, ನೀರಿನಿಂದ, ಆಹಾರದಿಂದ ಅಥವಾ ಪ್ರಾಣಿ ಪಾಲಕರಿಂದ ಪಸರಿಸಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸುವಂತೆ ಮತ್ತು ಬೇರೆ ಪ್ರಾಣಿಗಳಿಗೆ ಪಸರಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮೃಗಾಲಯಗಳಲ್ಲಿ ವನ್ಯಜೀವಿಗಳ ನಿರ್ವಹಣೆಯ ಕುರಿತಂತೆ ಮತ್ತು ಇಂತಹ ಸೋಂಕು ಕಾಣಿಸಿಕೊಂಡಾಗ ಹೇಗೆ ಕ್ರಮ ಕೈಗೊಳ್ಳಬೇಕು, ಏನೆಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪ್ರಮಾಣಿತ ಮಾನದಂಡ (ಎಸ್‍ಓಪಿ) ರೂಪಿಸಿ, ಕಡ್ಡಾಯವಾಗಿ ಅನುಪಾಲನೆ ಮಾಡುವಂತೆ ನಿರ್ದೇಶಿಸಲೂ ಸೂಚಿಸಿದರು.

ಮೃಗಾಲಯ, ವನ್ಯಜೀವಿಧಾಮಗಳಲ್ಲಿ ಪ್ರಾಣಿಗಳು ಮೃತಪಟ್ಟರೆ ವಿಳಂಬ ಮಾಡದೆ ಲೆಕ್ಕ ಪರಿಶೋಧನೆ ಮಾಡಿಸಿ, ಸರಕಾರಕ್ಕೆ ಮಾಹಿತಿ ನೀಡಬೇಕು. ಬೆಳಗಾವಿಯಲ್ಲಿ 31 ಕೃಷ್ಣ ಮೃಗಗಳ ಸಾವು ಎಚ್ಚರಿಕೆಯ ಗಂಟೆಯಾಗಿದ್ದು, ಉಳಿದ 7 ಕೃಷ್ಣಮೃಗಗಳಿಗೂ ಸೋಂಕಿರುವ ಕಾರಣ ಅವುಗಳಿಗೆ ಅಗತ್ಯ ಚಿಕಿತ್ಸೆ ನೀಡಲು ಹಾಗೂ ರಾಜ್ಯದ ಎಲ್ಲ ಮೃಗಾಲಯಗಳಲ್ಲೂ ಮುಂಜಾಗರೂಕತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇತ್ತ ಬನ್ನೇರುಘಟ್ಟದಿಂದ ನೆರೆ ರಾಜ್ಯಕ್ಕೆ ವನ್ಯಜೀವಿ ಸಾಗಿಸುವಾಗ ಅರವಳಿಕೆ ನೀಡಿದ್ದ ಕಾಡೆಮ್ಮೆ ಮೃತಪಟ್ಟಿರುವುದರಲ್ಲಿ ಅಧಿಕಾರಿ, ಸಿಬ್ಬಂದಿಯ ನಿರ್ಲಕ್ಷ್ಯ ಇದೆ ಎಂದು ದೂರುಗಳು ಬಂದಿದ್ದು, ಈ ಬಗ್ಗೆ ತಂಡ ರಚಿಸಿ ವರದಿ ನೀಡುವಂತೆ ಹಾಗೂ ವನ್ಯಜೀವಿಗಳ ನಿರ್ವಹಣೆಯ ಬಗ್ಗೆ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವಂತೆಯೂ ಸಚಿವರು ಸಭೆಯಲ್ಲಿ ಸೂಚನೆ ನೀಡಿದರು.

ಸಭೆಯಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News