×
Ad

"ನಿಮ್ಮ ಕ್ಷೇತ್ರಕ್ಕೆ ನೀಡಿದ 10 ಕೊಡುಗೆಗಳನ್ನು ತಿಳಿಸಿ": ಸಚಿವ ಪ್ರಿಯಾಂಕ್ ಖರ್ಗೆಗೆ ಸಂಸದ ಜಗದೀಶ್ ಶೆಟ್ಟರ್ ಸವಾಲು

Update: 2025-07-29 22:14 IST

 ಸಚಿವ ಪ್ರಿಯಾಂಕ್ ಖರ್ಗೆ / ಸಂಸದ ಜಗದೀಶ್ ಶೆಟ್ಟರ್

ಬೆಂಗಳೂರು: ‘ಬಸವ ತತ್ವದ ಬಗ್ಗೆ ಕೇಳುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆಯವರೇ, ಈ ದೇಶದಲ್ಲಿ ಬಸವಣ್ಣನವರ ಮಾತುಗಳನ್ನು ಅಕ್ಷರಶಃ ಪಾಲಿಸಿದವರು ಯಾರಾದರೂ ಇದ್ದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ’ ಎಂದು ಸಂಸದ ಜಗದೀಶ್ ಶೆಟ್ಟರ್, ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ತಿರುಗೇಟು ನೀಡಿದ್ದಾರೆ.

ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಶೆಟ್ಟರ್, ‘ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷದ ರಾಜ್ಯಾಧ್ಯಕ್ಷ, ಸಚಿವ, ಮುಖ್ಯಮಂತ್ರಿಯಾಗಿ ನಿರ್ಮಿಸಿದ್ದು ಆರೆಸ್ಸೆಸ್. ಹೀಗೇ ಹೇಳುತ್ತಾ ಹೋದರೆ ಇಂತಹ ಲಕ್ಷಾಂತರ ಸಾಧನೆಗಳನ್ನು ನಾನು ಹೇಳಬಲ್ಲೆ. ಆದರೆ, ನಿಮಗೂ ಒಂದು ಪ್ರಶ್ನೆ ಇದೆ. ನೀವು ದೇಶಕ್ಕೆ, ರಾಜ್ಯಕ್ಕೆ, ಜಿಲ್ಲೆಗೆ ಬಿಡಿ.. ನಿಮ್ಮ ಕ್ಷೇತ್ರಕ್ಕೆ ನೀಡಿದ 10 ಕೊಡುಗೆಗಳನ್ನು ತಿಳಿಸಿ ಸಾಕು’ ಎಂದು ಸವಾಲು ಹಾಕಿದ್ದಾರೆ.

‘ರಾಜಕೀಯ ಭಾಷಣಕ್ಕಾಗಿ, ವೋಟ್ ಬ್ಯಾಂಕಿಗಾಗಿ ಬಸವತತ್ವ ಮಾತನಾಡುವ ನಿಮ್ಮಂತಹವರು ಅನೇಕರಿದ್ದಾರೆ, ಹಾಗೆ ಬದುಕುವುದು ಆದರ್ಶ. ಆರೆಸ್ಸೆಸ್‍ನ ಅನೇಕ ಪ್ರಚಾರಕರು ಹಾಗೆ ಬದುಕಿದ್ದಾರೆ. ಬಸವ ತತ್ವ ಇರುವವರು ನಿಮ್ಮನ್ನೇ ಒಪ್ಪುವುದಿಲ್ಲ ಎನ್ನುವುದು ಸತ್ಯ ಮಿಸ್ಟರ್ ಖರ್ಗೆ. ನೀವು ಬಾಯಲ್ಲಿ ಸಮಾನತೆ ಅಂತೀರಿ, ಕೃತಿಯಲ್ಲಿ ಮಾಡುವುದೆಲ್ಲ ಬೇಧಭಾವವೇ. ಬಸವತತ್ವ ಅಂದ್ರೆ ಏನು ಅಂತ ಹೇಳಬಹುದಾ ಪ್ರಿಯಾಂಕ್ ಖರ್ಗೆಯವರೇ?. ಇವತ್ತಿಗೂ ಸಂಘದ ಶಾಖೆಗಳಲ್ಲಿ ಬಸವಣ್ಣನವರ ವಚನಗಳನ್ನು ನಿತ್ಯ ಹೇಳಿ ಕೊಡಲಾಗುತ್ತದೆ’ ಎಂದು ಶೆಟ್ಟರ್ ತಿಳಿಸಿದ್ದಾರೆ.

ನೂರು ವರ್ಷಗಳ ಹಿಂದೆ ಆರೆಸ್ಸೆಸ್ ಅಸ್ತಿತ್ವಕ್ಕೆ ಬಂದಿದ್ದರೂ ಹಿಂದೂ ಸಮಾಜದ ಉತ್ತರದಾಯಿ ಸಂಘಟನೆಯಾಗಿ ಬೆಳೆದು ನಿಂತಿರುವುದಕ್ಕೆ ಕಾರಣ ಆರೆಸ್ಸೆಸ್ ಹಿಂದೂ ಸಮಾಜಕ್ಕೆ ಮಾಡಿದ ಕೆಲಸಗಳು ಎನ್ನುವುದನ್ನು ತಾವು ಅರಿಯುವ ಅಗತ್ಯವಿದೆ. ಕೂಗುಮಾರಿಯಂತೆ ಇತಿಹಾಸ ಅರಿಯದೆ ಮಾತನಾಡಿದ ಮಾತ್ರಕ್ಕೆ ನಿಮ್ಮ ಹೈಕಮಾಂಡ್ ನಿಮ್ಮನ್ನೇ ಸಿಎಂ ಮಾಡಲಾರದು. ಮತ್ತೆ ಹಿಂದೂ ಧರ್ಮಾಚರಣೆಯನ್ನೇ ಒಪ್ಪದವರು, ಈ ಧರ್ಮವನ್ನೇ ತೆಗಳುವುದನ್ನು ಕಾಯಕವಾಗಿಸಿಕೊಂಡವರು, ಹಿಂದೂ ಎನ್ನುವ ಪದದ ಅರ್ಥವನ್ನೇ ಕೆಡಿಸಲು ಹೊರಟಿದ್ದವರು ನೀವು. ನಿಮ್ಮಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?’ ಎಂದು ಅವರು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News