ಸತೀಶ್ ಜಾರಕಿಹೊಳಿ ಮಣಿಸಲು ಡಿಕೆಶಿಯಿಂದ ಶ್ರೀರಾಮುಲು ಅವರನ್ನು ಸೆಳೆಯಲು ಯತ್ನ : ಜನಾರ್ದನ ರೆಡ್ಡಿ
ಶ್ರೀರಾಮುಲು/ಜನಾರ್ಧನ ರೆಡ್ಡಿ
ಬೆಂಗಳೂರು : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯನ್ನು ಮಣಿಸಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಆರೋಪಿಸಿದರು.
ಗುರುವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮುಲು ನನಗೆ ಸ್ನೇಹಿತ. ಆದರೆ, ಆತ ಶತ್ರುಗಳ ಜೊತೆ ಸೇರಿಕೊಂಡು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದರು.
ಶ್ರೀರಾಮುಲು ಬಿಜೆಪಿ ಬಿಟ್ಟು ಹೋಗುವುದಾದರೆ ಹೋಗಲಿ, ಅದು ಅವರ ವೈಯಕ್ತಿಕ ವಿಚಾರ. ಆದರೆ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ. ಶ್ರೀರಾಮುಲು ಕಾಂಗ್ರೆಸ್‍ಗೆ ಹೋಗುತ್ತಾರಾ ಅಥವಾ ಬೇರೆ ಕಡೆ ಹೋಗುತ್ತಾರಾ ಅದು ಅವರಿಗೆ ಬಿಟ್ಟ ವಿಚಾರ. ಬಳ್ಳಾರಿಯಲ್ಲಿ ಇರೋ ವಾತಾವರಣ ನೋಡಿಕೊಂಡು ಶ್ರೀರಾಮುಲುರನ್ನು ಡಿ.ಕೆ.ಶಿವಕುಮಾರ್ ಕರೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂದು ಬಳ್ಳಾರಿ ಭಾಗದಲ್ಲಿ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ಶ್ರೀರಾಮುಲು ವಿರುದ್ಧ ನಾನು ಯಾವುದೇ ದೂರು ನೀಡಿಲ್ಲ. ಅಂತ ಕೀಳು ಸ್ವಭಾವ ನನ್ನದಲ್ಲ. ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಂಗಾರು ಹನುಮಂತುಗೆ ನಾನು ಟಿಕೆಟ್ ಕೊಡಿಸಲಿಲ್ಲ. ಈ ಭಾಗದಲ್ಲಿ ಮತ್ತೊಬ್ಬ ವಾಲ್ಮೀಕಿ ಸಮುದಾಯದ ನಾಯಕ ಬಂದರೆ ನನ್ನ ರಾಜಕೀಯ ಭವಿಷ್ಯಕ್ಕೆ ಪೆಟ್ಟು ಬೀಳಬಹುದು ಎಂಬ ಆತಂಕ ಅವರಲ್ಲಿರಬಹುದು ಎಂದು ಜನಾರ್ದನ ರೆಡ್ಡಿ ಟೀಕಿಸಿದರು.
ರಾಜ್ಯ ಮಟ್ಟದ ನಾಯಕ ಶ್ರೀರಾಮುಲುಗೆ ಸ್ವಂತ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗುತ್ತಿಲ್ಲ ಅಂದರೆ ಅವರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಸಂಡೂರು ಎಸ್‍ಟಿ ಮೀಸಲು ಕ್ಷೇತ್ರ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ರಾಮುಲು ಮೂರು ದಿನ ತಡವಾಗಿ ಸಂಡೂರು ಕ್ಷೇತ್ರಕ್ಕೆ ಬಂದರು. ಮುಖ್ಯಮಂತ್ರಿ ಆದಿಯಾಗಿ ಇಡೀ ಸರಕಾರವೇ ಬಂದು ಕುಳಿತಿತ್ತು. ಹಣದ ಹೊಳೆ ಹರಿಸಿದರು. ಇದರಿಂದಾಗಿ, ನಮಗೆ ಸೋಲಾಗಿದೆ. ಸದಾನಂದಗೌಡ ಅವರ ತಂಡ ವರಿಷ್ಠರಿಗೆ ಏನು ವರದಿ ನೀಡಿದೆಯೋ ನನಗೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.
ಶ್ರೀರಾಮುಲುನನ್ನು ರಾಜಕೀಯಕ್ಕೆ ಕರೆತಂದದ್ದು ನಾನು. 1999ರಲ್ಲಿ ಯಡಿಯೂರಪ್ಪ ಹಾಗೂ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿಸಿ, ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸಿದ್ದೆ. ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ರಾಮುಲುನನ್ನು ಮಂತ್ರಿ ಮಾಡಿಸಿದ್ದು ನಾನು. 2018ರಲ್ಲಿ ಮೊಳಕಾಲ್ಮೂರಿನಲ್ಲಿ ಅಲ್ಲಿನ ಶಾಸಕ ತಿಪ್ಪೇಸ್ವಾಮಿ ವಿರುದ್ಧ 45 ಸಾವಿರ ಮತಗಳಿಂದ ರಾಮುಲುನನ್ನು ಗೆಲ್ಲಿಸಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.
14 ವರ್ಷ ನಾನು ಬಳ್ಳಾರಿಯಿಂದ ದೂರವಿದ್ದೆ. ಈ ಅವಧಿಯಲ್ಲಿ ಶ್ರೀರಾಮುಲು ತಮ್ಮ ಮೈ ಮೇಲೆ ಬಹಳಷ್ಟು ಸಮಸ್ಯೆಗಳನ್ನು ಎಳೆದುಕೊಂಡಿದ್ದಾರೆ. ತನಿಖಾ ಸಂಸ್ಥೆಗಳೇನಾದರೂ ಈ ಬಗ್ಗೆ ತನಿಖೆ ಕೈಗೊಂಡರೆ ಅವರು ಸಮಸ್ಯೆ ಸಿಲುಕುವುದು ಖಂಡಿತ. ಈ ಬಗ್ಗೆ ಈಗ ಏನು ಹೇಳುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.
ರಡ್ಡಿಯವರೇ ಕಾಂಗ್ರೆಸ್ ಪಕ್ಷಕ್ಕೆ ಕಳುಹಿಸಲು ಪ್ರಯತ್ನ ಮಾಡುತ್ತಿರಬೇಕು :
ಸತೀಶ್ ಜಾರಕಿಹೊಳಿಯನ್ನು ಮಣಿಸಲು ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುತ್ತಿದ್ದಾರೆ ಎಂದು ತಮ್ಮ ಬಗ್ಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನನ್ನನ್ನು ಯಾರೂ ಭೇಟಿ ಮಾಡಿಲ್ಲ. ಬಿಜೆಪಿಯಲ್ಲಿ ಆಂತರಿಕ ಸಂಘರ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಬಹುಶಃ ಜನಾರ್ದನ ರೆಡ್ಡಿಯವರೇ ಶ್ರೀರಾಮುಲುರನ್ನು ನಮ್ಮ ಪಕ್ಷಕ್ಕೆ ಕಳುಹಿಸಲು ಪ್ರಯತ್ನ ಮಾಡುತ್ತಿರಬೇಕು ಎಂದರು.