×
Ad

ಜಯಲಲಿತಾರ ಆಸ್ತಿ ಪತ್ರಗಳು, ಅಪಾರ ಪ್ರಯಾಣದ ಒಡವೆಗಳು ತಮಿಳುನಾಡು ಸರಕಾರಕ್ಕೆ ಹಸ್ತಾಂತರ

Update: 2025-02-15 21:39 IST

 ಜಯಲಲಿತಾ | PTI

ಬೆಂಗಳೂರು: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿ ಪತ್ರಗಳು, ಅಪಾರ ಪ್ರಯಾಣದ ಒಡವೆ ತಮಿಳುನಾಡು ರಾಜ್ಯ ಸರಕಾರಕ್ಕೆ ಹಸ್ತಾಂತರಿಸಲಾಗಿದೆ.

ಜಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿ ಪತ್ರಗಳು, 11,344 ರೇಷ್ಮೆ ಸೀರೆಗಳು, 7,040 ಗ್ರಾಂ ತೂಕದ 468 ಬಗೆಯ ಚಿನ್ನ ಮತ್ತು ವಜ್ರ ಖಚಿತ ಆಭರಣಗಳು ಹಾಗೂ 750 ಜೊತೆ ಚಪ್ಪಲಿಗಳು, ಕೈಗಡಿಯಾರಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಹಸ್ತಾಂತರ ಮಾಡಲಾಗಿದೆ ಎಂದು ಗೊತ್ತಾಗಿದೆ.

ಭಾರೀ ಗಾತ್ರದ ಟ್ರಂಕ್‍ಗಳ ಜೊತೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ತಮಿಳುನಾಡಿನ ಅಧಿಕಾರಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಜಯಲಲಿತಾರಿಗೆ ಸೇರಿದ ಬೆಲೆ ಬಾಳುವ ವಸ್ತುಗಳನ್ನು ತಮಿಳುನಾಡಿಗೆ ಸಾಗಿಸಿದರು. ತಮಿಳುನಾಡಿನ ಅಧಿಕಾರಿಗಳು, ನ್ಯಾಯಾಧೀಶರ ಸಮ್ಮುಖದಲ್ಲಿ ಅವರಿಗೆ ಮಾಹಿತಿ ನೀಡಿ ಚಿನ್ನಾಭರಣಗಳನ್ನು ತೂಕ ಹಾಕಿ ಕೊಂಡೊಯ್ದಿದ್ದಾರೆ ಎಂದು ಹೇಳಲಾಗಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಬೆಲೆ ಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ಹರಾಜು ಹಾಕುವ ಬದಲು ತಮಿಳುನಾಡು ಸರಕಾರದ ಸುಪರ್ದಿಗೆ ನೀಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈ ಹಿಂದೆ ಆದೇಶಿಸಿತ್ತು. ಅವುಗಳನ್ನು ಹಿಂದಿರುಗಿಸಲು 2024ರ ಫೆ.19ಕ್ಕೆ ದಿನಾಂಕ ನಿಗದಿಪಡಿಸಿತ್ತು.

ಈ ಮಧ್ಯೆ ಜಯಲಲಿತಾರ ಸಂಬಂಧಿಕರು ಎಂದು ಹೇಳಿಕೊಂಡಿದ್ದ ದೀಪಾ ಮತ್ತು ದೀಪಕ್ ವಿಶೇಷ ನ್ಯಾಯಾಲಯದ ಆದೇಶದ ವಿರುದ್ಧ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರಿಂದ ಆದೇಶವನ್ನು ತಡೆಹಿಡಿದಿತ್ತು. ಮೇಲ್ಮನವಿ ವಜಾಗೊಂಡ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಜಯಲಲಿತಾರ ಆಭರಣಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಂಡಿದೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News