×
Ad

ಅನುದಾನ ಬಿಡುಗಡೆಗೆ ಸರಕಾರದ ತಾರತಮ್ಯ ಆರೋಪ; ಹೈಕೋರ್ಟ್ ಮೆಟ್ಟಿಲೇರಿದ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ

Update: 2025-10-14 21:26 IST

ಬೆಂಗಳೂರು : ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಶಾಸಕರ ವಿಧಾನಸಭಾ ಕ್ಷೇತ್ರಗಳ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ರಾಜ್ಯ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಕ್ಷೇಪಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಶ್ರೀನಿವಾಸಪುರ ಕ್ಷೇತ್ರಕ್ಕೆ ಮಂಜೂರು ಮಾಡಿರುವ ಅನುದಾನ ಬಿಡುಗಡೆ ಮಾಡಲು ಸರಕಾರಕ್ಕೆ ಆದೇಶಿಸುವಂತೆ ಕೋರಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಪೌರಾಡಳಿತ ಇಲಾಖೆ ನಿರ್ದೇಶಕ, ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ದೇಶಕರು, ಕೋಲಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಕಾರ್ಯಕಾರಿ ನಿರ್ವಹಣಾಧಿಕಾರಿಯನ್ನು (ಸಿಇಒ) ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿಯು ಇನ್ನಷ್ಟೇ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.

ಅರ್ಜಿದಾರರ ಆಕ್ಷೇಪವೇನು?

ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯ ಗ್ರಾಮಗಳಿಗೆ 2019ರ ಜನವರಿ 23ರಂದು 5 ಕೋಟಿ ರೂ. ಹಾಗೂ ಪುರಸಭೆಗೆ ಹೊಸದಾಗಿ ಸೇರ್ಪಡೆಗೊಂಡ ವಾರ್ಡ್‌ಗಳ ಅಭಿವೃದ್ಧಿಗೆ ಜುಲೈ 20ರಂದು 10 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆದರೆ, ಈವರೆಗೂ ಹಣ ಬಿಡುಗಡೆ ಮಾಡಿಲ್ಲ. 2023-24ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ನಿಧಿಯಿಂದ ಎಲ್ಲ ಕಾಂಗ್ರೆಸ್‌ ಶಾಸಕರು ಮತ್ತು ಸ್ವತಂತ್ರ ಶಾಸಕರ ಕ್ಷೇತ್ರಕ್ಕೆ ತಲಾ 25 ಕೋಟಿ ರೂ. ಬಿಡುಗಡೆ ಮಾಡಲು ಸರಕಾರ ಅದೇಶಿಸಿದೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ. ಇದರಿಂದ, ಶ್ರೀನಿವಾಸಪುರ ಪುರಸಭೆಯ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ 2024ರ ಫೆಬ್ರವರಿ 5ರಂದು ಮನವಿ ಸಲ್ಲಿಸಿ, ಶ್ರಿನಿವಾಸಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯ ಕೈಗೊಳ್ಳಲು 35 ಕೋಟಿ ರೂ. ಬಿಡುಗಡೆ ಮಾಡಲು ಕೋರಲಾಗಿತ್ತು. ಮಳೆಹಾನಿ ಪ್ರದೇಶಗಳ ಪರಿಹಾರ ಕಾಮಗಾರಿಗೆ 10 ಕೋಟಿ ಬಿಡುಗಡೆ ಅನುಮೋದಿಸಲು 2025ರ ಫೆಬ್ರವರಿ 17ರಂದು ಸಲ್ಲಿಸಿದ್ದ ಮನವಿಯಲ್ಲಿ ಕೋರಲಾಗಿತ್ತು. ಅದರಂತೆ ಕ್ಷೇತ್ರದಲ್ಲಿ ನೆರೆ ಪರಿಹಾರ ಕಾರ್ಯಗಳಿಗೆ 10 ಕೋಟಿ ರೂ. ಮಂಜೂರಾತಿಗೆ ಏಪ್ರಿಲ್ 3ರಂದು ಸರಕಾರ ಅನುಮೋದನೆ ನೀಡಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮುಖ್ಯಮಂತ್ರಿಗಳು ಕೋಲಾರ ಜಿಲ್ಲಾಧಿಕಾರಿಗೆ ಪತ್ರ ಬರೆದು ಕಾಂಗ್ರೆಸ್‌ ಶಾಸಕರಿರುವ ಬಂಗಾರಪೇಟೆ, ಕೆಜಿಎಫ್‌, ಕೋಲಾರ ಮತ್ತು ಮಾಲೂರು ವಿಧಾನಸಭಾ ಕ್ಷೇತ್ರಗಳಿಗೆ ತಲಾ 50 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಸೂಚಿಸಿದ್ದಾರೆ. ಕಳೆದ ಸೆಪ್ಟೆಂಬರ್ 15ರಂದು ಮುಖ್ಯಮಂತ್ರಿಗಳು ಪತ್ರ ಬರೆದು 25 ಕೋಟಿ ರೂ. ಮಂಜೂರು ಮಾಡಿರುವುದಾಗಿ ತಿಳಿಸಿದ್ದರು. ಆದರೆ, ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ಅನುದಾನ ಮಂಜೂರು ಹಾಗೂ ಬಿಡುಗಡೆ ವಿಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಶಾಸಕರ ಕ್ಷೇತ್ರಗಳ ನಡುವೆ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಆದ್ದರಿಂದ, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ ಅನುದಾನವನ್ನು 1 ತಿಂಗಳೊಳಗೆ ಬಿಡುಗಡೆಗೊಳಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಶಾಸಕರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News