×
Ad

ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ ಅವಧಿ ವಿಸ್ತರಣೆ : ನ್ಯಾ.ನಾಗಮೋಹನ್ ದಾಸ್

Update: 2025-05-16 19:49 IST

 ನ್ಯಾ.ಎಚ್.ಎನ್.ನಾಗಮೋಹನ್ ದಾಸ್

ಬೆಂಗಳೂರು : ಪರಿಶಿಷ್ಠ ಜಾತಿ ಒಳಮೀಸಲಾತಿ ಸಂಬಂಧ ಸಮೀಕ್ಷೆ ಅವಧಿಯನ್ನು ಮೇ 25ರ ವರೆಗೂ ವಿಸ್ತರಣೆ ಮಾಡಲಾಗಿದ್ದು, ಅಲ್ಲಿಯ ವರೆಗೂ ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಪ್ರಕ್ರಿಯೆ ಚಾಲ್ತಿಯಲ್ಲಿರಲಿದೆ ಎಂದು ಪರಿಶಿಷ್ಟ ಜಾತಿ ಒಳಮೀಸಲಾತಿಯ ಏಕಸದಸ್ಯ ಆಯೋಗ ಅಧ್ಯಕ್ಷ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾಂತ್ರಿಕ ಅಡೆತಡೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸರಿಪಡಿಸಲು ಸಮೀಕ್ಷಾ ದಿನಾಂಕವನ್ನು ವಿಸ್ತರಿಸಬೇಕೆಂದು ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಮನವಿ ಮಾಡಿಕೊಂಡಿದ್ದಾರೆ. ಅದರಂತೆ ಅದರಂತೆ ಮನೆ-ಮನೆ ಭೇಟಿ ನೀಡಿ ಸಮೀಕ್ಷೆಯನ್ನು ಮೇ 25ರ ವರೆಗೆ ವಿಸ್ತರಿಸಲಾಗಿದೆ. ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) ಮೇ 26ರಿಂದ ಮೇ 28ರ ವರೆಗೆ ವಿಸ್ತರಿಸಲಾಗಿದೆ. ಆನ್‍ಲೈನ್ ಮೂಲಕ ಸ್ವಯಂ ಘೋಷಣೆ ದಿನಾಂಕವನ್ನು ಮೇ 19ರಿಂದ ಮೇ 28ರ ವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಒಳಮೀಸಲಾತಿ ಸಂಬಂಧ ಸಮೀಕ್ಷೆಯನ್ನು ಮೇ5ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದರ ಮೂಲಕ ರಾಜ್ಯಾದ್ಯಂತ ಈಗಾಗಲೇ ಪ್ರಾರಂಭಿಸಲಾಗಿದೆ. ಅದರಂತೆ ಇದುವರೆಗೂ ಒಳಮೀಸಲಾತಿ ಸಂಬಂಧಿಸಿದಂತೆ ನಡೆಸಲಾಗುತ್ತಿರುವ ಪರಿಶಿಷ್ಟ ಜಾತಿಗಳ ಸಮೀಕ್ಷೆ ಶೇ.73ರಷ್ಟು ಪೂರ್ಣಗೊಂಡಿದೆ ಎಂದು ಅವರು ಉಲ್ಲೇಖಿಸಿದರು.

ಸಮೀಕ್ಷೆ ಪ್ರಮಾಣ?: ಮೇ 15ರ ಅಂತ್ಯಕ್ಕೆ ಮನೆ ಮನೆ ಸಮೀಕ್ಷೆಯಲ್ಲಿ ಶೇ.73.72ರಷ್ಟು ಪ್ರಗತಿ ಸಾಧಿಸಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 18,41,258 ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ನಡೆಸಲಾಗಿದ್ದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ 55,027 ಎಸ್‍ಸಿ ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಆ ಮೂಲಕ ಒಟ್ಟು 18,96,285 ಎಸ್‍ಸಿ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.ಇದನ್ನು ಹೊರತುಪಡಿಸಿ ಸುಮಾರು 1,10,32,556 ಎಸ್‍ಸಿಯೇತರ ಕುಟುಂಬಗಳನ್ನು ಭೇಟಿ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಅಡ್ಡಿಪಡಿಸಿದರೆ ಕ್ರಮ: ಯಾರೂ ಸಮೀಕ್ಷೆ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ನಿಮ್ಮಲ್ಲಿನ ಮಾಹಿತಿ ನೀಡಿ ಅಷ್ಟೇ. ಆದರೆ, ಅಪಾರ್ಟ್‍ಮೆಂಟ್‍ಗಳಲ್ಲಿ ಸಮೀಕ್ಷೆಗೆ ಅಡ್ಡಿಪಡಿಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಅಡ್ಡಿ ಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆಗೆ ಈ ಸಂಬಂಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ ಎಂದು ಅವರು ಹೇಳಿದರು.

ಎಸ್ಸಿ ಸಮುದಾಯ ಹೊರುತಪಡಿಸಿ ಬೇರೆ ಸಮುದಾಯ, ವ್ಯಕ್ತಿಗಳ ಯಾವುದೇ ಮಾಹಿತಿ ಪಡೆಯುವುದು ಬೇಡ ಅಂದಿದ್ದೇವೆ. ಸಮೀಕ್ಷೆ ಮುಗಿದ ಮೇಲೆ ದತ್ತಾಂಶ ವಿಶ್ಲೇಷಣೆ ಮಾಡುತ್ತೇವೆ. ಮಾನದಂಡದ ಪ್ರಕಾರ ಏನೆಲ್ಲಾ ವರ್ಗೀಕರಣ ಆಗಬೇಕು ಅದನ್ನು ಮಾಡಲಿದ್ದೇವೆ. ಯಾವುದೇ ವಿಳಂಬ ಆಗದಂತೆ ವರದಿ ಸರಕಾರಕ್ಕೆ ನೀಡುತ್ತೇವೆ ಎಂದು ಅವರು ತಿಳಿಸಿದರು.

ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಶಿಕ್ಷರಿಗೆ ಶಿಕ್ಷಣ ಇಲಾಖೆಯ ಮಾನದಂಡದ ಪ್ರಕಾರ, ಗೌರವಧನ ನೀಡಲಾಗುತ್ತದೆ. ಶಿಕ್ಷಕೇತರರಿಗೆ ತಲಾ 5ಸಾವಿರ ರೂ. ಕೊಡಲಾಗುತ್ತದೆ. ಜೊತೆಗೆ ಪ್ರತಿ ಮನೆಗೆ ತಲಾ 100ರೂ. ಗೌರವಧನ ಪಾವತಿ ಮಾಡಲಾಗುತ್ತದೆ ಎಂದ ಅವರು, ಎಸ್‍ಸಿ ಸಿಬ್ಬಂದಿ ವರ್ಗದ ಉಪಜಾತಿಗಳ ಬಗ್ಗೆ ಇಲಾಖಾವಾರು ಮಾಹಿತಿ ಕೇಳಲಾಗಿದ್ದು, ರಾಜ್ಯದಲ್ಲಿನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್‍ಸಿ ವಿದ್ಯಾರ್ಥಿಗಳ ಮಾಹಿತಿ ಬಂದಿದೆ. ಅದರ ವಿಶ್ಲೇಷಣೆ ನಡೆಸಲಾಗುತ್ತಿದೆ ಎಂದರು.

ಉಳಿದಂತೆ 40 ಇಲಾಖೆಗಳಿಂದ ಎಸ್‍ಸಿ ಉದ್ಯೋಗಿಗಳ ಉಪಜಾತಿಗಳ ಮಾಹಿತಿ ಬಂದಿದೆ. ಅದರ ಜೊತೆಗೆ ಎಸ್ಸಿ ಸಮುದಾಯದ ರಾಜಕೀಯ ಸ್ಥಾನಮಾನ ಬಗ್ಗೆನೂ ಮಾಹಿತಿ ಕೇಳಿದ್ದೇವೆ. ಈ ಸಂಬಂಧ ಪೂರ್ಣ ಮಾಹಿತಿ ನೀಡದ ಇಲಾಖೆಗೆ ಎಚ್ಚರಿಕೆ ನೀಡಿದ್ದು, ನೋಟಿಸ್ ಕೂಡ ನೀಡಲಾಗಿದೆ ಎಂದು ನಾಗಮೋಹನ್ ದಾಸ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್, ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ಕುಂಠಿತ: ಪ್ರಾರಂಭಿಕ ಹಂತದ ಸಮೀಕ್ಷೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಗತಿ ಕುಂಠಿತವಾಗಿದ್ದು, ಈ ಬಗ್ಗೆ ಬಿಬಿಎಂಪಿಯ ಮುಖ್ಯ ಆಯುಕ್ತರು ಹಾಗೂ ವಲಯ ಆಯುಕ್ತರುಗಳೊಂದಿಗೆ ಮೇ12ರಂದು ಸಭೆ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸರಕಾರ ಶಾಲಾ ಶಿಕ್ಷಕರ ಕೊರತೆಯಿರುವುದನ್ನು ಗಮನಿಸಿ, ಸಮರ್ಪಕವಾಗಿ ಸಮೀಕ್ಷೆಯನ್ನು ಕೈಗೊಳ್ಳಲು ಸಮರ್ಥರಿರುವ ಪದವಿ ಹೊಂದಿದ ಆಶಾ ಕಾರ್ಯಕರ್ತೆಯರನ್ನು ಅಥವಾ ಅಂಗನವಾಡಿ ಕಾರ್ಯಕರ್ತರನ್ನು ಗಣತಿದಾರರನ್ನಾಗಿ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಹೊಸ ನಾಲ್ಕು ಉಪಜಾತಿ ಸೇರ್ಪಡೆಗೆ ಚಿಂತನೆ: ಆದಿ ಕರ್ನಾಟಕ, ಆದಿ ಆಂಧ್ರ, ಆದಿ ಜಾಂಬವ ಸಂಬಂಧ ಜಾತಿ ಹೆಸರು ಹೇಳಬೇಕು. ಒಂದು ವೇಳೆ ಆದಿ ಕರ್ನಾಟಕ ಅಂದರೆ ಈ 101ರಲ್ಲಿ ಯಾವ ಉಪಜಾತಿ ಎಂದು ಹೇಳಬೇಕು. ಹೇಳಿಲ್ಲವಾದರೆ ಹಾಗೇ ನಮೂದು ಮಾಡಲಾಗುತ್ತದೆ. ಕೆಲ ಮಾನದಂಡದ ಆಧಾರದ ಮೇಲೆ ನಾವು ಮುಂದೆ ಆದಿ ಕರ್ನಾಟಕ, ಆದಿ ಆಂಧ್ರದ ಜಾತಿಯವರನ್ನು ಯಾವ ಉಪಜಾತಿ ಎಂದು ತೀರ್ಮಾನಿಸುತ್ತೇವೆ. ಅದೇ ರೀತಿ, ಕರಾವಳಿ ಭಾಗದಲ್ಲಿ ಮಾನಸ, ಮಾದಿಗ ದಾಸರಿ ಸೇರಿದಂತೆ ನಾಲ್ಕು ಮೂಲ ಉಪಜಾತಿಗಳಿದ್ದು, ಇದನ್ನು ಸಮೀಕ್ಷೆ ಪಟ್ಟಿಯಲ್ಲಿ ಸೇರ್ಪಡೆಗೆ ಚಿಂತನೆ ನಡೆದಿದೆ ಎಂದು ನ್ಯಾ.ನಾಗಮೋಹನ್ ದಾಸ್ ಹೇಳಿದರು.

20 ಲಕ್ಷ: ಸಂಜೆಯ ವೇಳೆಗೆ ಒಟ್ಟು ಎಸ್‍ಸಿ ಕುಟುಂಬಗಳ ಸಂಖ್ಯೆ 20 ಲಕ್ಷ ದಾಟುವ ವಿಶ್ವಾಸ ಇದೆ. ಸದ್ಯ 31,006 ಜನ ಲಾಗ್‍ಇನ್ ಆಗಿ ಸಮೀಕ್ಷೆ ನಡೆಸುತ್ತಿದ್ದಾರೆ. 2011 ಜಾತಿ ಗಣತಿ ಪ್ರಕಾರ ರಾಜ್ಯದಲ್ಲಿ 21,40,304 ಪರಿಶಿಷ್ಟ ಜಾತಿ ಕುಟುಂಬಗಳಿದ್ದು, 2025ರ ವೇಳೆಗೆ ಸುಮಾರು 25,72,050 ಕುಟುಂಬಗಳು ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ನಾಗಮೋಹನ್ ದಾಸ್ ತಿಳಿಸಿದರು.

ಸಮೀಕ್ಷೆ ಸಹಾಯವಾಣಿ: ಸಮೀಕ್ಷೆ ವೇಳೆ ಗೊಂದಲ ಅಥವಾ ಈ ಕುರಿತು ಹೆಚ್ಚುವರಿ ಮಾಹಿತಿಗಾಗಿ ರಾಜ್ಯ ಮಟ್ಟದ ಸಹಾಯವಾಣಿ ಸಂಖ್ಯೆ 94813 59000 ಅನ್ನು ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News