×
Ad

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ರಾಜೀನಾಮೆಗೆ ಒತ್ತಾಯಿಸಿ ಜೂ.17ಕ್ಕೆ ಬಿಜೆಪಿಯಿಂದ ಹೋರಾಟ : ಕೆ.ಗೋಪಾಲಯ್ಯ

Update: 2025-06-15 18:27 IST

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಕರ್ನಾಟಕ ರಾಜ್ಯಕ್ಕೆ ದೊಡ್ಡ ಕಳಂಕ. ಈ ದುರ್ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಜೂ.17ಕ್ಕೆ ಬಿಜೆಪಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕೆ.ಗೋಪಾಲಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜೂ.17ರ ಬೆಳಗ್ಗೆ 10.30ಕ್ಕೆ ನಗರದ ಫ್ರೀಡಂ ಪಾರ್ಕ್‍ನಲ್ಲಿ ಹೋರಾಟ ನಡೆಯಲಿದ್ದು, ಪಕ್ಷದ ಎಲ್ಲ ಶಾಸಕರು, ಪರಿಷತ್ ಸದಸ್ಯರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೇರಿದಂತೆ ಸುಮಾರು 10ಸಾವಿರ ಜನ ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಆರ್‌ಸಿಬಿ ಕಪ್ ಗೆದ್ದ ಸಂದರ್ಭದಲ್ಲಿ ಪೊಲೀಸ್ ಭದ್ರತೆಯಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ, ಕಾಂಗ್ರೆಸ್ ಸರಕಾರವು ಗೌರವ ಕೊಡುವ ಸಂಬಂಧ ಎರಡು ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮಗಳು ಬೇಡವೆಂದು ಪೊಲೀಸ್ ಇಲಾಖೆ ಪತ್ರದ ಮೂಲಕ ತಿಳಿಸಿದರೂ ಸಿಎಂ ಕಾರ್ಯಕ್ರಮ ಮಾಡಬೇಕೆಂದು ಹಠಕ್ಕೆ ಬಿದ್ದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ ಎಂದು ಅವರು ದೂರಿದರು.

ಲೆಕ್ಕ ಕೊಡಿ: ಕಾಲ್ತುಳಿತ ದುರ್ಘಟನೆಯನ್ನು ಮರೆಮಾಚುವ ಮತ್ತೊಮ್ಮೆ ಜಾತಿಗಣತಿ ಮಾಡಲು ಸರಕಾರ ನಿರ್ಧರಿಸಿದೆ. ಅದನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ಹಿಂದಿನ ಜನಗಣತಿಗೆ ಜನರ ತೆರಿಗೆ ಹಣದಿಂದ 167ಕೋಟಿ ರೂ.ಹಣ ವೆಚ್ಚ ಮಾಡಿದ್ದು, ಅದರ ಲೆಕ್ಕವನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಕೆ.ಗೋಪಾಲಯ್ಯ ಆಗ್ರಹಿಸಿದರು.

ನ್ಯಾಯ ಒದಗಿಸಿ: ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ 11 ಮಂದಿ ಯುವಕರ ಸಾವಿಗೆ ಸರಕಾರ ನ್ಯಾಯ ಒದಗಿಸಬೇಕು. ಇಡೀ ದೇಶಕ್ಕೆ ಒಂದೇ ಕಾನೂನು ಇದೆ. ಹೀಗಾಗಿ ಸಿಎಂ, ಡಿಸಿಎಂ ಘಟನೆ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News