×
Ad

ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಬಿಜೆಪಿ ನಾಯಕ ರವಿಕುಮಾರ್ ಅವಹೇಳನಕಾರಿ ಹೇಳಿಕೆ: ಐಎಎಸ್ ಅಧಿಕಾರಿಗಳ ಸಂಘ ಖಂಡನೆ

Update: 2025-05-26 21:04 IST

ಎನ್‌.ರವಿಕುಮಾರ್

ಕಲಬುರಗಿ : ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಫೌಝಿಯಾ ತರನ್ನುಮ್ ವಿರುದ್ಧ ಸಾರ್ವಜನಿಕ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ನೀಡಿದ ಅವಮಾನಕರ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಗಳನ್ನು ಖಂಡಿಸುವುದಾಗಿ ಐಎಎಸ್ ಅಧಿಕಾರಿಗಳ ಸಂಘವು ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಐಎಎಸ್ ಅಧಿಕಾರಿಗಳ ಸಂಘ, ಕಲಬುರಗಿ‌ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಓರ್ವ ನಿಷ್ಠಾವಂತ ಅಧಿಕಾರಿ. ಅವರು ಸಮರ್ಪಣೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ರವಿಕುಮಾರ್ ನೀಡಿದ ಹೇಳಿಕೆಗಳು ಆಧಾರರಹಿತವಾಗಿದೆ ಎಂದು ಹೇಳಿದೆ.

ಇದು ಸಂಪೂರ್ಣವಾಗಿ ನ್ಯಾಯ ಸಮ್ಮತವಲ್ಲದ ಮತ್ತು ತರ್ಕಬದ್ಧವಾಗಿಲ್ಲದ ಹೇಳಿಕೆಯಾಗಿದೆ. ಇಂತಹ ಪ್ರಚೋದನಕಾರಿ ಮತ್ತು ಸುಳ್ಳು ಹೇಳಿಕೆಗಳು ನಿಷ್ಠಾವಂತ ನಾಗರಿಕ ಸೇವಾ ಅಧಿಕಾರಿಗಳ ಘನತೆಗೆ ಕಳಂಕ ತರುವುದಲ್ಲದೆ, ತೀವ್ರವಾಗಿ ಮಾನಸಿಕ ಆಘಾತವನ್ನುಂಟುಮಾಡುತ್ತದೆ. ಈ ಸಂದರ್ಭದಲ್ಲಿ ಫೌಝಿಯಾ ತರನ್ನುಮ್ ಅವರೊಂದಿಗೆ ಐಎಎಸ್ ಅಧಿಕಾರಿಗಳ ಸಂಘವು ದೃಢವಾಗಿ ನಿಲ್ಲುತ್ತದೆ ಎಂದು ಹೇಳಿದೆ.

ಪ್ರಾಮಾಣಿಕತೆ ಮತ್ತು ಸಮರ್ಪಿತವಾಗಿ ಕರ್ನಾಟಕದ ಜನರ ಸೇವೆ ಸಲ್ಲಿಸುತ್ತಿರುವ ಅಧಿಕಾರಿಯ ಖ್ಯಾತಿಯನ್ನು ಸಾರ್ವಜನಿಕವಾಗಿ ಹಾಳು ಮಾಡುವ ಈ ಪ್ರಯತ್ನವು ಕಳವಳಕಾರಿಯಾಗಿದೆ. ರವಿ ಕುಮಾರ್ ಅವರು ಬೇಜವಾಬ್ದಾರಿ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆ ಬಗ್ಗೆ ಬೇಷರತ್ ಕ್ಷಮೆಯಾಚಿಸಬೇಕು. ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿದ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಹುದ್ದೆಯನ್ನು ಹೊಂದಿರುವ ಅಧಿಕಾರಿಯ ಘನತೆಯನ್ನು ಅವಮಾನಿಸಲು ಪ್ರಯತ್ನಿಸಿದ್ದಕ್ಕಾಗಿ ಸಂಬಂಧಿತ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕೆಂದು ನಾವು ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದು ಐಎಎಸ್ ಅಧಿಕಾರಿಗಳ ಸಂಘವು ಹೇಳಿದೆ.

ನಾಗರಿಕ ಸೇವಕರು ಭಯ, ಪೂರ್ವಾಗ್ರಹ ಅಥವಾ ಅನಗತ್ಯ ಒತ್ತಡವಿಲ್ಲದೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಅವಕಾಶ ನೀಡಬೇಕು. ಅನ್ಯಾಯವಾಗಿ ಗುರಿಯಾಗಿಸಿಕೊಂಡ ಎಲ್ಲಾ ಅಧಿಕಾರಿಗಳ ಬೆಂಬಲಕ್ಕೆ ಐಎಎಸ್ ಅಧಿಕಾರಿಗಳ ಸಂಘವು ನಿಲ್ಲಲಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News