ಕಲ್ಲೆ ಶಿವೋತ್ತಮ ರಾವ್ ಅವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ
ಬೆಂಗಳೂರು: ಉಡುಪಿ ಜಿಲ್ಲೆಯ ಕಲ್ಲೆ ಶಿವೋತ್ತಮ ರಾವ್ ಅವರು 2025-26ನೇ ಸಾಲಿನ ಡಿ. ದೇವರಾಜ ಅರಸು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿಗೆ ಅರ್ಹ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳ ಹೆಸರನ್ನು ಶಿಫಾರಸ್ಸು ಮಾಡಲು ಡಾ.ಸಿ.ಎಸ್. ದ್ವಾರಕನಾಥ್ ಅವರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸರಕಾರ ತಿಳಿಸಿದೆ.
ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಯು 5 ಲಕ್ಷ ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕಲ್ಲೆ ಶಿವೋತ್ತಮರಾವ್ ಅವರು 1929ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜನಿಸಿದ್ದು, ಅವರು 14ನೇ ವಯಸ್ಸಿಗೆ ಮಂಗಳೂರಿನ ಕುಡವರ 'ನವಭಾರತ' ಎಂಬ ದೈನಿಕ ಪತ್ರಿಕೆಗೆ ವರದಿಗಾರನಾಗಿ ಕೆಲಸಕ್ಕೆ ಸೇರಿದರು. ಆನಂತರ ಕಡಂಗೋಡ್ಲು ಶಂಕರಭಟ್ಟರ ‘ರಾಷ್ಟ್ರ ಬಂಧು’ ವಾರಪತ್ರಿಕೆಗೆ ಸೇರಿ, ರಾಷ್ಟ್ರಮತ' ದಲ್ಲಿ ಕೆಲ ದಿನವಿದ್ದು ಅಲ್ಲಿಂದ ನೇರವಾಗಿ ಬೆಂಗಳೂರಿನ ಬಿ.ಎನ್.ಗುಪ್ತರ ‘ಜನಪ್ರಗತಿ' ಪತ್ರಿಕೆಗೆ ಬಂದರು. ಅಲ್ಲಿ 14 ವರ್ಷಗಳ ಕಾಲ, ಕಾರ್ಯನಿರ್ವಾಹಕ ಸಂಪಾದಕರಾಗಿ, ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಅದಾದ ಮೇಲೆ ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ತಲಾ ಮೂರು ವರ್ಷ ಸೇವೆ ಸಲ್ಲಿಸಿದರು. ʼಎನ್‌ಲೈಟ್' ಎಂಬ ಇಂಗ್ಲಿಷ್ ವಾರಪತ್ರಿಕೆಗೂ ಬರೆದರು. ಇವರು ಜೆಪಿ, ಲೋಹಿಯಾರ ಸಮಾಜವಾದ; ಎಡಪಂಥೀಯ ವಿಚಾರಧಾರೆಯನ್ನು ಒಪ್ಪಿದವರು.
ತಾಯಿನಾಡು, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ ದೈನಿಕಗಳು ಮತ್ತು ಜನಪ್ರಗತಿ, ಕಂಠೀರವ ಎಂಬ ವಾರಪತ್ರಿಕೆಗಳು, ಜನಪ್ರಗತಿ ವಾರಪತ್ರಿಕೆಯಲ್ಲಿ ಸರಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸುತ್ತಿದ್ದರು.
ಕಲೆ ಶಿವೋತ್ತಮರಾವ್ ರವರು ಹಾವನೂರು ಆಯೋಗ ರಚನೆ ಪೂರ್ವದಲ್ಲಿಯೇ ಹಿಂದುಳಿದ ವರ್ಗಗಳ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದವರು ಪೆರಿಯಾರ್ ಚಳವಳಿಯ ಪ್ರತಿಪಾದಕರು, ಡಿ.ದೇವರಾಜ ಅರಸು ಅವರಿಗಿಂತ ಮೊದಲೇ ಹಿಂದುಳಿದ ವರ್ಗಗಳ ಸಮುದಾಯದ ಯುವಜನರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಮೂಡಿಸಲು ಶ್ರಮಿಸಿದ್ದ ವ್ಯಕ್ತಿ. 'ಜನಪ್ರಗತಿ' ಪತ್ರಿಕೆಯ ಸಂಪಾದಕರಾಗಿ ನೂರಾರು ಯುವಕರನ್ನು ಬರವಣಿಗೆ ಕ್ಷೇತ್ರಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.
ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಗೆ ಬದ್ಧರಾಗಿದ್ದ ಶಿವೋತ್ತಮರಾಯರು ಪತ್ರಿಕೋದ್ಯಮದ ಮೌಲ್ಯವನ್ನು ಹೆಚ್ಚಿಸಿದವರಲ್ಲಿ ಪ್ರಮುಖರಾಗಿದ್ದರು.