ಕನ್ನಡದ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ | ಒಂದು ವಾರ ಚಿತ್ರ ಬಿಡುಗಡೆ ಇಲ್ಲವೆಂದು ಹೈಕೋರ್ಟ್‌ಗೆ ತಿಳಿಸಿದ ಚಿತ್ರದ ಸಹ ನಿರ್ಮಾಪಕರು
ಕಮಲ್ ಹಾಸನ್ | PC : X
ಬೆಂಗಳೂರು : ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಮಲ್ ಹಾಸನ್ ಅವರ ʼಥಗ್ ಲೈಪ್ʼ ಚಿತ್ರದ ಬಿಡುಗಡೆಗೆ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
ಭದ್ರತೆ ಕೋರಿ ಚಿತ್ರದ ಸಹ ನಿರ್ಮಾಪಕ ಸಂಸ್ಥೆ ರಾಜಕಮಲ್ ಫಿಲ್ಮ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿ, ಕ್ಷಮೆ ಕೇಳುವಂತೆ ಸಲಹೆ ನೀಡಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿತ್ತು.
ಆದರೆ, ಮಧ್ಯಾಹ್ನ ವಿಚಾರಣೆ ಆರಂಭಿಸುತ್ತಿದ್ದಂತೆ ಕಮಲ್ ಹಾಸನ್ ಪರ ವಕೀಲರು, ಕ್ಷಮೆ ಕೇಳದೆ ಕನ್ನಡದ ಬಗ್ಗೆ ಅವರ ಪ್ರೀತಿ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಕ್ಷಮೆ ಕೇಳಿದರೆ ಎಲ್ಲ ವಿವಾದ ಮುಗಿಯುತ್ತಿತ್ತು ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸಲಹೆ ನೀಡಿದರು.
ಈ ವೇಳೆ ಅರ್ಜಿದಾರ ರಾಜಕಮಲ್ ಫಿಲ್ಮ್ ಪರ ವಕೀಲರು, ಒಂದು ವಾರ ಕರ್ನಾಟಕದಲ್ಲಿ ಚಿತ್ರ ರಿಲೀಸ್ ಮಾಡುವುದಿಲ್ಲವೆಂದು ಹೇಳಿಕೆ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್ ಜೂನ್ 10ಕ್ಕೆ ವಿಚಾರಣೆ ಮುಂದೂಡಿದರು. ಅಲ್ಲಿಯವರೆಗೆ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಕ್ಕೆ ಬಿಡುಗಡೆ ಭಾಗ್ಯ ಇಲ್ಲವಾಗಿದೆ. ಕ್ಷಮೆ ಕೇಳುವಂತೆ ನ್ಯಾಯಮೂರ್ತಿಗಳ ಸಲಹೆಯನ್ನು ಕಮಲ್ ಹಾಸನ್ ತಿರಸ್ಕರಿಸಿದ್ದಾರೆ.