‘ಕನ್ನಡ ಧ್ವಜ’ಕ್ಕೆ ಮಾನ್ಯತೆ ಕೋರಿ ಕೇಂದ್ರಕ್ಕೆ ಪತ್ರ : ಸಚಿವ ಶಿವರಾಜ್ ತಂಗಡಗಿ
ಶಿವರಾಜ್ ತಂಗಡಗಿ
ಬೆಂಗಳೂರು : ‘ಕನ್ನಡ ಧ್ವಜ’ ಹಳದಿ-ಕೆಂಪು ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂದು ಕೋರಿ, ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ.
ಶನಿವಾರ ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘2017ರಲ್ಲೇ ಕೆಂಪು-ಹಳದಿ ಬಾವುಟ ಅಧಿಕೃತ ಮಾನ್ಯತೆ ನೀಡಬೇಕೆಂದು ಕೋರಿ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ, ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದೀಗ ಮತ್ತೊಮ್ಮೆ ಈ ಕುರಿತು ಪತ್ರ ಬರೆಯಲಿದ್ದೇನೆ ಎಂದು ಹೇಳಿದರು.
ಶೀಘ್ರದಲ್ಲೇ ನನ್ನ ನೇತೃತ್ವದ ನಿಯೋಗ ಹೊಸದಿಲ್ಲಿಗೆ ತೆರಳಲಿದ್ದು, ಕೇಂದ್ರದ ಸಂಸ್ಕೃತಿ ಸಚಿವರ ಭೇಟಿ ಮಾಡಲಿದ್ದೇನೆ. ಆ ಮೂಲಕ ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ಹಾಗೂ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಅನುದಾನ ಕೋರಿ ಮನವಿ ಸಲ್ಲಿಸಲಾಗುವುದು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಶೋಭಾ ಕರಂದ್ಲಾಜೆ ಅವರು, ಕೇವಲ ಹೇಳಿಕೆ ನೀಡುವುದನ್ನು ಬಿಟ್ಟು ಕೇಂದ್ರದಿಂದ ಅನುದಾನ ಕೊಡಿಸಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿಯಿಂದಲೇ ನೆಮ್ಮದಿ: ಕೇಂದ್ರ ಸರಕಾರ ಯಾವುದೇ ಒಂದು ಜನಪರ ಯೋಜನೆಯನ್ನು ಅನುಷ್ಟಾನಗೊಳಿಸಿಲ್ಲ. ಆದರೆ, ರಾಜ್ಯದ ಜನತೆ ನಮ್ಮ ಸರಕಾರ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಹೀಗಾಗಿ ರಾಜ್ಯದ ಜನತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.