×
Ad

ಕನ್ನಡೇತರರಿಗೆ ಕನ್ನಡ ಕಲಿಕೆ ರಾಜ್ಯಾದ್ಯಂತ ವಿಸ್ತರಣೆ: ಡಾ.ಬಿಳಿಮಲೆ

Update: 2025-05-20 23:44 IST

ಪ್ರೊ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ನಗರಕ್ಕೆ ಸೀಮಿತವಾಗಿದ್ದ ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತೀರ್ಮಾನಿಸಿದ್ದು, ಪೂರ್ವಭಾವಿ ಕ್ರಮಗಳಿಗೆ ಚಾಲನೆ ನೀಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಮಂಗಳವಾರ ಪ್ರಕಟನೆ ಹೊರಡಿಸಿರುವ ಅವರು, ರಾಜ್ಯಾದ್ಯಂತ ಕೇಂದ್ರ ಸರಕಾರ ಉದ್ಯಮಗಳು, ಬ್ಯಾಂಕುಗಳು, ಕೇಂದ್ರ ಸರಕಾರಿ ಕಚೇರಿಗಳಿದ್ದು, ಈ ಸಂಸ್ಥೆಗಳಲ್ಲಿ ಹಲವಾರು ಅನ್ಯಭಾಷಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಾರ-ವ್ಯವಹಾರಗಳಿಗೆ ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಕಂಡುಕೊಂಡಿರುವ ಹಲವು ಅನ್ಯಭಾಷಿಕರು ಇದ್ದಾರೆ ಎಂದು ತಿಳಿಸಿದ್ದಾರೆ.

ಅನ್ಯಭಾಷಿಕರನ್ನು ಪ್ರತಿ ಜಿಲ್ಲೆಗಳಲ್ಲಿ ಗುರುತಿಸಿ ಅವರಿಗೆ ಕನ್ನಡ ಕಲಿಸುವ ಪ್ರಯತ್ನವನ್ನು ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಿರ್ಣಯಿಸಿದ್ದು, ಈ ಬೃಹತ್ ಅಭಿಯಾನಕ್ಕೆ ರಾಜ್ಯಾದ್ಯಂತ ಇರುವ ಆಸಕ್ತ ಸಂಘ ಸಂಸ್ಥೆಗಳು ಸಂಬಂಧಪಟ್ಟ ಜಿಲ್ಲಾಡಳಿತದೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಅನ್ಯಭಾಷಿಕರಿಗೆ ಕನ್ನಡವನ್ನು ಕಲಿಸಲು ಜಿಲ್ಲಾಡಳಿತಗಳು ತರಗತಿ ನಡೆಸುವ ಸ್ಥಳಾವಕಾಶವನ್ನು ಒದಗಿಸಲಿವೆ. ಜಿಲ್ಲಾಡಳಿತಗಳಿಂದ ನೇಮಿಸಲ್ಪಡುವ ಶಿಕ್ಷಕರುಗಳಿಗೆ ಗೌರವ ಸಂಭಾವನೆಯನ್ನು ಪ್ರಾಧಿಕಾರವೇ ನೀಡಲಿದೆ. ಈ ಕುರಿತಂತೆ ವಿಶೇಷ ಪಠ್ಯಕ್ರಮವನ್ನು ನಿರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅನ್ಯಭಾಷಿಕರಿಗೆ ವಾರದಲ್ಲಿ 3 ದಿನದಂತೆ 3 ತಿಂಗಳು ತರಗತಿಗಳನ್ನು ನಡೆಸಲಾಗುವುದು. ಹಾಗೆಯೇ ಕಲಿಕಾರ್ಥಿಗಳಿಂದ ಶಿಕ್ಷಕರ ಬೋಧನಾ ಗುಣಮಟ್ಟವನ್ನು ಅಳೆಯಲು ತೀರ್ಮಾನಿಸಲಾಗಿದೆ. ಈ ಪ್ರಯತ್ನದಲ್ಲಿ ವೃತ್ತಿಪರತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಬಿಳಿಮಲೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News