×
Ad

ನಾಳೆ ರಾಜ್ಯ ಬಜೆಟ್ ಮಂಡನೆ ; 4 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯ ಸಾಧ್ಯತೆ

Update: 2025-03-06 21:51 IST

ಬೆಂಗಳೂರು : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ (ಮಾ.7) ಬೆಳಗ್ಗೆ ತಮ್ಮ ದಾಖಲೆಯ 16ನೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ರಾಜ್ಯದ ಜನತೆಯ ಮೇಲೆ ಯಾವುದೇ ಹೊರೆ ಹಾಕದೆ, ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ.

ಕೃಷಿ, ಉದ್ಯಮ, ಕೈಗಾರಿಕೆ ಸೇರಿದಂತೆ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಜನವರ್ಗಗಳ ಸಭೆ ನಡೆಸಿರುವ ಸಿದ್ದರಾಮಯ್ಯ ಅವರು, ಅವರೆಲ್ಲರ ಬೇಡಿಕೆಗಳನ್ನು ಆಲಿಸಿದ್ದಾರೆ. ಸಂಪನ್ಮೂಲ ಕ್ರೂಢೀಕರಣಕ್ಕೆ ವಿಶೇಷ ಆಸಕ್ತಿ ವಹಿಸಿರುವ ಅವರು, ಒಂದು ತಿಂಗಳಿಂದ ಬಜೆಟ್ ಮಂಡನೆಗೆ ಅಗತ್ಯ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳ ಮುಂದುವರಿಕೆ ಸೇರಿದಂತೆ ಬಡಜನರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಮುಂಗಡ ಪತ್ರದಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ. ‘ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ಕೊರತೆ ಇದೆ’ ಎಂಬ ವಿಪಕ್ಷಗಳ ನಾಯಕರ ಆರೋಪಕ್ಕೆ ತಿರುಗೇಟು ನೀಡಲು ಅಭಿವೃದ್ದಿಗೆ ಹೆಚ್ಚಿನ ಅನುದಾನ ಒದಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಕಟ್ಟಡಗಳ ನಿರ್ಮಾಣ, ಕೊಠಡಿಗಳ ಸಂಖ್ಯೆ ಹೆಚ್ಚಳ, ಶಿಕ್ಷಕರ ತರಬೇತಿ ಹಾಗೂ ನೇಮಕಾತಿ, ಆರೋಗ್ಯ ಕ್ಷೇತ್ರದ ಬಲವರ್ಧನೆ, ಜಿಲ್ಲಾ ಕೇಂದ್ರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಮೂಲಸೌಲಭ್ಯ, ಕೈಗಾರಿಕಾ ವಲಯಗಳ ನಿರ್ಮಾಣಕ್ಕೆ ಹೊಸ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ.

ಆಯವ್ಯಯದಲ್ಲಿ ಕೇಂದ್ರ ಸರಕಾರದ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಉಲ್ಲೇಖಿಸಲಿರುವ ಸಿದ್ದರಾಮಯ್ಯ, ನ್ಯಾಯಯುತ ತೆರಿಗೆ ಪಾಲಿಗಾಗಿ ಒತ್ತಡ ಹೇರುವ ಪ್ರಯತ್ನ ಮಾಡಲಿದ್ದಾರೆ. ಮೇಕೆದಾಟು ಅಣೆಕಟ್ಟು ಹಾಗೂ ಮಹದಾಯಿ ನೀರಾವರಿ ಯೋಜನೆಗಳ ಪ್ರಸ್ತಾಪ ಮಾಡಲಿದ್ದು, ಅಗತ್ಯ ಅನುದಾನ ಒದಗಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳ ಜತೆಗೆ ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಒತ್ತು ನೀಡಲಿದ್ದು, ಮಹಿಳಾ ಸ್ವಸಹಾಯ ಮತ್ತು ಸ್ತ್ರೀಶಕ್ತಿ ಸಂಘಗಳ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯೋಜನೆ ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ಜತೆಗೆ ವಿವಿಧ ಸಮುದಾಯಗಳಿಗೆ ಮುಂಗಡ ಪತ್ರದಲ್ಲಿ ಆದ್ಯತೆ ನೀಡುವ ನಿರೀಕ್ಷೆ ಇದೆ.

2024-25ನೇ ಸಾಲಿನಲ್ಲಿ 3.71 ಲಕ್ಷ ಕೋಟಿ ರೂಪಾಯಿ ಗಾತ್ರದ ಆಯವ್ಯಯವನ್ನು ಮಂಡಿಸಿದ್ದ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು, 2025-26ನೆ ಸಾಲಿನಲ್ಲಿ ಒಟ್ಟಾರೆ 4 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಬಜೆಟ್ ಮಂಡಿಸುವ ಸಾಧ್ಯತೆಗಳಿವೆ.

‘ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ರಾಜ್ಯದ ಏಳು ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ. ನಾಡಿನ ಪ್ರತಿಯೊಬ್ಬ ಪ್ರಜೆಯನ್ನು ಸರಕಾರದ ಯಾವುದಾದರೊಂದು ಯೋಜನೆಯ ಫಲಾನುಭವಿಯನ್ನಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಬಜೆಟ್ ಮೂಲಕ ಮಾಡಿದ್ದೇನೆ ಎನ್ನುವ ಭರವಸೆ ನನಗಿದೆ’

-ಸಿದ್ದರಾಮಯ್ಯ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News