×
Ad

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿ ಜಿಲ್ಲೆಗೆ ಎರಡರಂತೆ 62 ಮೆಟ್ರಿಕ್ ನಂತರದ ವಸತಿ ನಿಲಯ ಸ್ಥಾಪನೆ : ಸಿಎಂ ಸಿದ್ದರಾಮಯ್ಯ

Update: 2025-03-07 17:10 IST

ಬೆಂಗಳೂರು : ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿ ಜಿಲ್ಲೆಗೆ ಎರಡರಂತೆ 62 ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 15 ಕೋಟಿ ರೂ. ಒದಗಿಸಲಾಗಿದೆ. ಇವುಗಳ ಪೈಕಿ ಒಟ್ಟು 10 ಇಂಜಿನಿಯರಿಂಗ್ ವಸತಿ ನಿಲಯಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ 50:50 ಅನುದಾನದ ಅನುಪಾತದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು 50 ಕೋಟಿ ರೂ. ಒದಗಿಸಲಾಗುವುದು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ 30 ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಶೈಕ್ಷಣಿಕ ಸೌಲಭ್ಯಗಳಿಂದ ವರ್ಗಗಳಲ್ಲಿಯೇ ಅತ್ಯಂತ ವಂಚಿತರಾಗಿರುವ, ಹಿಂದುಳಿದ  46 ಅಲೆಮಾರಿ ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದರಂತೆ ಡಿ.ದೇವರಾಜ ಅರಸು ವಸತಿ ಶಾಲೆಗಳನ್ನು ಕ್ರೈಸ್ ವತಿಯಿಂದ ಪ್ರಾರಂಭಿಸಲಾಗುವುದು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರದ ವತಿಯಿಂದ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಮತ್ತು ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ 28 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಕಟ್ಟಡ ದುರಸ್ತಿ ಮಾಡಲು 25 ಕೋಟಿ ರೂ. ಒದಗಿಸಲಾಗುವುದು. ಆಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು. ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದವರಿಗೆ ಭೂ ಒಡೆತನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಇದರೊಂದಿಗೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕೌಶಲ್ಯ ತರಬೇತಿ ನೀಡಲಾಗುವುದು ಎಂದರು.

ಹಿಂದುಳಿದ ವರ್ಗಗಳ ಅಭ್ಯರ್ಥಿಗಳು IAS, IPS, KAS, KSPS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಡಲು ಬೆಂಗಳೂರು ನಗರದಲ್ಲಿ ಎರಡು ಸುಸಜ್ಜಿತ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುವುದು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಕೈಗಾರಿಕಾ ನಿವೇಶನ/ಜಮೀನುಗಳನ್ನು ಮಂಜೂರು ಮಾಡುವಾಗ ಪ್ರತಿ ಕೈಗಾರಿಕಾ ಪ್ರದೇಶದ ಹಂಚಿಕೆಯಲ್ಲಿ, ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ ಮತ್ತು 2ಬಿ ಸಮುದಾಯಗಳಿಗೆ ಶೇ.20 ರಷ್ಟು ಭೂಮಿ ಮೀಸಲಿರಿಸಲಾಗುವುದು. ಹಂಚಿಕೆ ಸಂದರ್ಭದಲ್ಲಿ ನಿವೇಶನದ ಪ್ರಾರಂಭಿಕ ಠೇವಣೆ ಭರಿಸಿದ ನಂತರ ಬಾಕಿ ಹಣ ಪಾವತಿಸಲು ಒಂದು ವರ್ಷದ ಕಾಲಾವಕಾಶವನ್ನು ನೀಡಲಾಗುವುದು ಎಂದರು.

ಜಿಲ್ಲಾ ಕೇಂದ್ರಗಳಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ನಿಲಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವೃತ್ತಿ ಮಾರ್ಗದರ್ಶನಕ್ಕೆ (career guidance) ತರಬೇತಿ ನೀಡಲಾಗುವುದು. ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ವಿದ್ಯುತ್ ಚಾಲಿತ ನಾಲ್ಕು ಚಕ್ರಗಳ ವಾಹನ ಖರೀದಿಸಿ, ಆಹಾರ ಕಿಯೋಸ್ಕ್ (Kiosk) ಪ್ರಾರಂಭಿಸಲು ಪ್ರತಿ ಫಲಾನುಭವಿಗೆ ಗರಿಷ್ಠ 3 ಲಕ್ಷ ರೂ. ಸಹಾಯಧನವನ್ನು ನಿಗಮಗಳ ಮೂಲಕ ಒದಗಿಸಲಾಗುವುದು. ಹಿಂದುಳಿದ ವರ್ಗಗಳ ಇಲಾಖೆಯಡಿ ಕಲ್ಯಾಣ ಬರುವ ನಿಗಮಗಳಿಗೆ 2025-26 ನೇ ಸಾಲಿನಲ್ಲಿ 422 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ.

ಪರಿಶಿಷ್ಟ ವರ್ಗಗಳ ಕಲ್ಯಾಣ :

► 2024-25ನೇ ಸಾಲಿನಲ್ಲಿ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಒಟ್ಟಾರೆ 3,67,281 ವಿದ್ಯಾರ್ಥಿಗಳಿಗೆ ಒಟ್ಟು 120 ಕೋಟಿ ರೂ. ವಿದ್ಯಾರ್ಥಿವೇತನ ಮಂಜೂರು ಮಾಡಲಾಗಿದೆ. ಈ ಯೋಜನೆಯನ್ನು ಮುಂದುವರೆಸಲಾಗುವುದು.

► ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ 12 ಬುಡಕಟ್ಟು ಸಮುದಾಯಗಳ 47,859 ಕುಟುಂಬಗಳಿಗೆ ಪೌಷ್ಟಿಕ ಆಹಾರ ಯೋಜನೆಯಡಿ 120 ಕೋಟಿ ರೂ. ವೆಚ್ಚದಲ್ಲಿ ಪೌಷ್ಟಿಕ ಆಹಾರ ಕಿಟ್‌ಗಳನ್ನು ನೀಡಲಾಗುತ್ತಿದೆ.

► ಬುಡಕಟ್ಟು ಜನಾಂಗದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ 78 ಬುಡಕಟ್ಟು ವಸತಿ ಶಾಲೆಗಳಲ್ಲಿ 2025-26ನೇ ಸಾಲಿನಿಂದ 7ನೇ ತರಗತಿಯನ್ನು ಪ್ರಾರಂಭಿಸಲಾಗುವುದು. ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿನ ಐದು ವಸತಿ ಶಾಲೆಗಳನ್ನು 12ನೇ ತರಗತಿಯವರೆಗೆ ಮೇಲ್ದರ್ಜೆಗೇರಿಸಲಾಗುವುದು.

► 2025-26ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ 20 ವಿದ್ಯಾರ್ಥಿನಿಲಯಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು.

► 40 ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಸಂಸ್ಕರಿಸಲು ನೆರವಾಗುವಂತೆ ಲ್ಯಾಂಪ್ಸ್ (LAMPS) ಸಹಕಾರ ಸಂಘಗಳಿಗೆ ದುಡಿಯುವ ಬಂಡವಾಳ ರೂಪದಲ್ಲಿ ತಲಾ ಐದು ಲಕ್ಷ ರೂ. ಸಹಾಯಧನ ನೀಡಲಾಗುವುದು.

► ರಾಜ್ಯದ ಬುಡಕಟ್ಟು ಸಂಸ್ಕೃತಿಯನ್ನು ಪರಿಚಯಿಸಲು ಮೈಸೂರು ನಗರದಲ್ಲಿ ಇರುವ ಬುಡಕಟ್ಟು ಸಂಶೋಧನಾ ಕೇಂದ್ರದ ಆವರಣದಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

► ಅರಣ್ಯ, ಆರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಸೋಲಿಗ, ಹಲಸರು, ಜೇನು ಕುರುಬ, ಗೌಡಲು, ಸಿದ್ದಿ, ಕುಡಿಯ, ಮಲೆಕುಡಿಯ, ಕಾಡುಕುರುಬ, ಇರುಳಿಗ, ಕೊರಗ, ಬೆಟ್ಟಕುರುಬ, ಯರವ, ಪಣಿಯನ್ ಇತ್ಯಾದಿ ಪರಿಶಿಷ್ಟ ಪಂಗಡದ ಬುಡಕಟ್ಟುಗಳ ಜನಾಂಗದವರಿಗೆ ಮೂಲಸೌಕರ್ಯಗಳನ್ನು ಒದಗಿಸಲು 200 ಕೋಟಿ ರೂ. ಅನುದಾನ ನೀಡಲಾಗುವುದು.

► ಅರಣ್ಯ, ಆರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ 13 ಬುಡಕಟ್ಟು ಜನಾಂಗಗಳಾದ ಜೇನು ಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಲಸರು, ಗೌಡಲು, ಸಿದ್ದಿ, ಬೆಟ್ಟಕುರುಬ, ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಈ ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿಯನ್ನು ಕೈಗೊಳ್ಳಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News