×
Ad

ಗಡಿಯಲ್ಲಿ ಮುಂದುವರಿದ ‘ಉದ್ವಿಗ್ನ ಸ್ಥಿತಿ’; ಕೆಎಸ್ಸಾರ್ಟಿಸಿ ಚಾಲಕನ ಮುಖಕ್ಕೆ ಕೇಸರಿ ಬಣ್ಣ, ಜೈ ಮಹಾರಾಷ್ಟ್ರ ಕೂಗಿಸಿ ಪುಂಡಾಟ

Update: 2025-02-24 20:45 IST

screengrab:youtube/South First

ಬೆಂಗಳೂರು: ಮರಾಠಿ ಭಾಷೆ ಮಾತನಾಡದ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ಬೆನ್ನಲ್ಲೇ ಮಹಾರಾಷ್ಟ್ರದ ಸೋಲಾಪುರದಲ್ಲಿ ಮತ್ತೋರ್ವ ಕೆಎಸ್ಸಾರ್ಟಿಸಿ ಚಾಲಕನನ್ನು ಬಸ್ಸಿನಿಂದ ಕೆಳಗೆ ಇಳಿಸಿ, ಮುಖಕ್ಕೆ ಕೇಸರಿ ಬಣ್ಣ ಬಳಿದು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿಸಿ ಶಿವಸೇನೆ (ಉದ್ಧವ್ ಠಾಕ್ರೆ) ಬಣ ಹಾಗೂ ಕೆಲ ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ಇಲ್ಲಿನ ಸಾಥ್ ರಸ್ತೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಇಳಕಲ್-ಸೋಲಾಪುರ ನಗರಗಳ ನಡುವೆ ಸಂಚರಿಸುವ ಬಸ್ ಅನ್ನು ಗುರಿಯಾಗಿಸಿಕೊಂಡು ತಡೆದ ಶಿವಸೇನೆ (ಉದ್ಧವ್ ಠಾಕ್ರೆ) ಪಕ್ಷದ ಕಾರ್ಯಕರ್ತರು, ಚಾಲಕನನ್ನು ಬಸ್ಸಿನಿಂದ ಕೆಳಗೆ ಇಳಿಸಿ, ಮುಖಕ್ಕೆ ಕೇಸರಿ ಬಣ್ಣ ಬಳಿದು ಜೈ ಮಹಾರಾಷ್ಟ್ರ ಎಂದು ಒತ್ತಾಯ ಪೂರಕವಾಗಿ ಘೋಷಣೆ ಹೇಳಿಸಿದ್ದಾರೆ. ಅಲ್ಲದೇ, ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ, ಜೈ ಮಹಾರಾಷ್ಟ್ರ, ಜೈ ಭವಾನಿ ಎಂದು ಬಸ್ಸಿನ ಮೇಲೆ ಬರೆದು, ಘೋಷಣೆ ಕೂಗಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಬಸ್ಸಿನಲ್ಲಿ ಸುಮಾರು 35 ಪ್ರಯಾಣಿಕರು ಇದ್ದರು. ಪುಂಡಾಟ ಬಳಿಕ ಬಸ್ ಅನ್ನು ಬಿಟ್ಟು ಕಳುಹಿಸಿದ್ದಾರೆ. ಈ ಕುರಿತು ವಿಡಿಯೊ ವೈರಲ್ ಆದ ಬೆನ್ನಲ್ಲೇ ಸ್ಥಳಕ್ಕೆ ಸದರ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಇನ್ನೊಂದೆಡೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸರಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ಮಾಡುವಂತೆ ಸೂಚಿಸಲಾಗುವುದು. ಜತೆಗೆ ಸೊಲ್ಲಾಪುರ ಜಿಲ್ಲೆಯ ಅಧಿಕಾರಿಗಳ ಮಟ್ಟದಲ್ಲಿ ಸಭೆ ಮಾಡಲಾಗುವುದು ಎಂದು ತಿಳಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಬಸ್ಸಿಗೆ ಅವರು ಮಸಿ ಬಳಿಯೋದು, ಅವರ ಬಸ್ಸಿಗೆ ನಾವು ಮಸಿ ಬಳಿಯುವುದರಲ್ಲಿ ಅರ್ಥವಿಲ್ಲ. ಇದರಿಂದ ಎರಡೂ ಸಂಸ್ಥೆಗಳಿಗೆ ನಷ್ಟ ಆಗಲಿದೆ. ಮಹಾರಾಷ್ಟ್ರದವರು ಇಲ್ಲಿ ಬರಬೇಕು, ನಮ್ಮವರು ಅಲ್ಲಿಗೆ ಹೋಗಬೇಕು ಎಂದ ಅವರು, ನಮ್ಮ ರಾಜ್ಯಕ್ಕೆ ಬರುವ ಮಹಾರಾಷ್ಟ್ರ ಬಸ್‍ಗಳಿಗೆ ಹಾಗೂ ನಮ್ಮ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ಸುಗಳು ಇದೀಗ ಸ್ಥಗಿತಗೊಂಡಿವೆ. ಅವುಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ಪೋಕ್ಸೊ ಪ್ರಕರಣದಿಂದ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಸ್ವಲ್ಪ ಚಿಂತೆಗೀಡಾಗಿದ್ದಾರೆ. ಈಗಾಗಲೇ ಕೆಎಸ್ಸಾರ್ಟಿಸಿ ಅಧಿಕಾರಿಗಳು ಪೊಲೀಸರೊಂದಿಗೆ ಮಾತನಾಡಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಉದ್ದೇಶ ಪೂರಕವಾಗಿಯೇ ನಿರ್ವಾಹಕನ ವಿರುದ್ಧ ಸುಳ್ಳು ದೂರು ನೀಡಲಾಗಿದೆ. ಈ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ನಡೆಯಬೇಕು. ಜತೆಗೆ, ಪೊಲೀಸರು ಕನಿಷ್ಠ ಪರಿಜ್ಞಾನ ಹೊಂದಿರಬೇಕಿತ್ತು ಎಂದು ತಿಳಿಸಿದರು.

ನಿರ್ವಾಹಕನ ಮೇಲೆ ಪೋಕ್ಸೊ ಪ್ರಕರಣ ವಿಚಾರದಲ್ಲಿ ಮಾರಿಹಾಳ ಪೊಲೀಸ್ ಠಾಣೆ ಸಿಪಿಐ ತಮ್ಮ ಕರ್ತವ್ಯ ನಿಭಾಯಿಸುವುದರಲ್ಲಿ ವಿಫಲರಾಗಿದ್ದಾರೆ. ಅವರು ಯಾರ ಒತ್ತಡಕ್ಕೆ ಮಣಿದರು ಎಂದು ಅವರನ್ನೇ ಕೇಳಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಸೋಮವಾರ ಬೆಳಗಾವಿ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಮತ್ತು ಯಾರ ಗಮನಕ್ಕೂ ಅವರು ಬಂದಿಲ್ಲ. ನಾನು ಮತ್ತು ಸಹೋದರ ಚನ್ನರಾಜ ಅವರು ಪೊಲೀಸ್ ಆಯುಕ್ತರೊಂದಿಗೆ ಅವತ್ತು ರಾತ್ರಿ 11 ಗಂಟೆವರೆಗೆ ಸಂಪರ್ಕದಲ್ಲಿ ಇದ್ದೆವು. ತ್ವರಿತವಾಗಿ ಕ್ರಮ ತೆಗೆದುಕೊಳ್ಳದೇ ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಹೀಗೆ ಹೇಳಿದಾಗಲೂ ರಾತ್ರೋ ರಾತ್ರಿ 12 ಗಂಟೆಗೆ ಪೋಕ್ಸೋ ಪ್ರಕರಣ ಹಾಕಿದ್ದಾರೆ. ಹಾಗಾಗಿ, ಈ ಬಗ್ಗೆ ತನಿಖೆ ನಡೆಸುತ್ತೇವೆ. ಈ ಪ್ರಕರಣ ಬಗ್ಗೆ ಗೃಹ ಸಚಿವರು ಮತ್ತು ಡಿಜಿ ಅವರ ಜೊತೆಗೂ ಮಾತನಾಡಿದ್ದೇನೆ ಎಂದು ಹೇಳಿದರು.

ಸಾರಿಗೆ ಸಿಬ್ಬಂದಿಗಳಿಗೆ ಸೂಕ್ತ ಸುರಕ್ಷತೆಯನ್ನು ಒದಗಿಸಬೇಕು.ಜತೆಗೆ ಎಲ್ಲ ಹಳ್ಳಿಗಳ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಚೌಕಿಗಳನ್ನು ನಿರ್ಮಿಸಬೇಕೆಂದು ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಕಾರ್ಯಾಧ್ಯಕ್ಷ ಆರ್.ಎಫ್.ಕವಳಿಕಾಯಿ ಒತ್ತಾಯಿಸಿದ್ದಾರೆ.

ನಾಳೆ ಬೆಳಗಾವಿ ಚಲೋ:

ಕನ್ನಡಿಗ ನಿರ್ವಾಹಕನ ಮೇಲೆ ಆದ ಅನ್ಯಾಯ ಖಂಡಿಸಿ ಫೆ.25 ರಂದು ಕನ್ನಡ ಪರ ಸಂಘಟನೆಗಳು ಬೆಳಗಾವಿ ಚಲೋ ಪ್ರತಿಭಟನೆಗೆ ಕರೆ ನೀಡಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಈ ಕೂಡಲೇ ನಿರ್ವಾಹಕನ ಮೇಲೆ ದಾಖಲಾಗಿರುವ ಪೊಕ್ಸೊ ಕಾಯ್ದೆ ಪ್ರಕರಣವನ್ನು ರದ್ದುಗೊಳಿಸಬೇಕು. ಗಡಿ ಭಾಗದಲ್ಲಿ ಕನ್ನಡಿಗರಿಗೆ ರಕ್ಷಣೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News