×
Ad

ಜಿಎಸ್‍ಟಿ ದರ ಇಳಿಕೆಯ ಬಳಿಕ ಕರ್ನಾಟಕಕ್ಕೆ 15 ಸಾವಿರ ಕೋಟಿ ರೂಪಾಯಿ ಕೊರತೆ: ಸಚಿವ ರಾಮಲಿಂಗಾರೆಡ್ಡಿ

Update: 2025-09-04 23:37 IST

ಸಚಿವ ರಾಮಲಿಂಗಾರೆಡ್ಡಿ 

ಬೆಂಗಳೂರು: ಜಿಎಸ್‍ಟಿ ದರ ಇಳಿಕೆಯ ಬಳಿಕ ಕರ್ನಾಟಕಕ್ಕೆ 15 ಸಾವಿರ ಕೋಟಿ ರೂಪಾಯಿ ಕೊರತೆಯಾಗುವುದು. ಇದನ್ನು ಕೇಂದ್ರ ಸರಕಾರವೇ ಕೊಡಬೇಕು. ನಮಗಷ್ಟೇ ಅಲ್ಲ; ಎಲ್ಲ ರಾಜ್ಯಗಳಿಗೂ ಕೊಡಬೇಕು. ರಾಜ್ಯ ಸರಕಾರ ಕೊಡುವ 1 ರೂ. ತೆರಿಗೆ ಹಣದಲ್ಲಿ 12 ಪೈಸೆ ಮಾತ್ರ ಕೊಡುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಜಿಎಸ್‍ಟಿ ವ್ಯವಸ್ಥೆ ಜಾರಿಗೆ ತಂದು ಜನರಿಗೆ ಸಾಕಷ್ಟು ಹೊರೆ ಮಾಡಿದೆ. ಬಡವರು, ಮಧ್ಯಮವರ್ಗದ ಮೇಲೆ ಹೊಡೆತ ಬಿದ್ದಿತ್ತು. ರಾಜ್ಯದಿಂದ 4.5 ಲಕ್ಷ ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿ ಕೇಂದ್ರಕ್ಕೆ ಹೋಗುತ್ತಿತ್ತು. ಅಲ್ಲಿಂದ ನಮಗೆ ತೀರಾ ಕಡಿಮೆ ವಾಪಸ್ ಬರುತ್ತಿತ್ತು ಎಂದರು.

ಕೇಂದ್ರ ಸರಕಾರದ ಜಿಎಸ್‍ಟಿ ದರ ಇಳಿಕೆಯ ನಿರ್ಧಾರ ಜನರಿಗೆ ಅನುಕೂಲ ಆಗುತ್ತದೆ. ರಾಜ್ಯ ಸರಕಾರಕ್ಕೆ ನಷ್ಟವಾಗುತ್ತದೆ. ನಮ್ಮಿಂದ ಹೆಚ್ಚುವರಿ ವಸೂಲಿ ಮಾಡುತ್ತಿದ್ದಾರೆ. ಆದರೆ, ನಮಗೆ ಕೊಡುವುದು ಅತ್ಯಲ್ಪ ಎಂದು ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಕೆ.ಎನ್.ರಾಜಣ್ಣ ಬಿಜೆಪಿಗೆ ಹೋಗುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ರಾಜಣ್ಣ ಅವರು 1972ರಿಂದಲೂ ಕಾಂಗ್ರೆಸ್‍ನಲ್ಲಿದ್ದಾರೆ. ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ. ಅವರು ಇಲ್ಲೇ ಇರುತ್ತಾರೆ ಎಂದರು.

ತಾರ್ಕಿಕ ಅಂತ್ಯಕ್ಕೆ ಬುರುಡೆ ಪ್ರಕರಣ: ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಕುರಿತು ಸ್ವಾಮೀಜಿಗಳಿಂದ ಎನ್‍ಐಎ ತನಿಖೆಗೆ ಒತ್ತಾಯ ಕೇಳಿಬರುತ್ತಿರುವ ವಿಚಾರವಾಗಿ ಮಾತನಾಡಿದ ರಾಮಲಿಂಗಾರೆಡ್ಡಿ, ಪ್ರಕರಣವನ್ನು ಎಸ್‍ಐಟಿ ತನಿಖೆ ಮಾಡುತ್ತಿದೆ. ಸರಿಯಾದ ದಾರಿಯಲ್ಲೇ ತನಿಖೆ ನಡೆಯುತ್ತಿದೆ. ಬಿಜೆಪಿಯವರು ಎನ್‍ಐಎ ತನಿಖೆಗೆ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಹಿಂದೆ ಸೌಜನ್ಯ ಪ್ರಕರಣದಲ್ಲಿ ಸಿಬಿಐ ತನಿಖೆ ಮಾಡಿತ್ತು. ಆಗ ಸೌಜನ್ಯಗೆ ಯಾಕೆ ನ್ಯಾಯ ಸಿಗಲಿಲ್ಲ. ಬುರುಡೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬರಲಿದೆ. ಧರ್ಮಸ್ಥಳ ಅಷ್ಟೇ ಅಲ್ಲ, ರಾಜ್ಯದ ಎಲ್ಲ ದೇವಸ್ಥಾನಗಳು ಸುರಕ್ಷಿತವಾಗಿವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News