×
Ad

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣ: ಬಿಡುಗಡೆ ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2025-06-11 21:32 IST

Photo credit: PTI

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಬಿಡುಗಡೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಆದೇಶವನ್ನು ಹೈಕೋರ್ಟ್ ಜೂ.12ಕ್ಕೆ ಕಾಯ್ದಿರಿಸಿದೆ.

ತಮ್ಮ ಬಂಧನ ಅಕ್ರಮವಾಗಿರುವುದರಿಂದ ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರಿ ನಿಖಿಲ್ ಸೋಸಲೆ, ಡಿಎನ್‍ಎ ಎಂಟರ್‍ಟೈನ್‍ಮೆಂಟ್ ನೆಟ್‍ವಕ್ರ್ಸ್ ನ ನಿರ್ದೇಶಕ ಸುನೀಲ್ ಮ್ಯಾಥ್ಯೂ, ಡಿಎನ್‍ಎನ ಮ್ಯಾನೇಜರ್ ಕಿರಣ್ ಕುಮಾರ್ ಮತ್ತು ಸಮಂತ್ ಮಾವಿನಕೆರೆ ಅವರ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‍ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ಬುಧವಾರ ವಿಚಾರಣೆ ನಡೆಸಿತು.

ರಾಜ್ಯ ಸರಕಾರದ ಪರವಾಗಿ ವಾದಿಸಿದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಆರ್‍ಸಿಬಿ ಮತ್ತು ಡಿಎನ್‍ಎ ಸೂಕ್ತ ರೀತಿಯಲ್ಲಿ ಜನ ಸಂದಣಿ ನಿರ್ವಹಣೆ ಮಾಡದಿರುವುದೇ ಕಾಲ್ತುಳಿತಕ್ಕೆ ಕಾರಣ ಎಂದು ಆರೋಪಿಸಿದರು.

ಘಟನೆ ದಿನದಂದು ಸುಮಾರು 4 ಲಕ್ಷ ಜನರು ಕ್ರೀಡಾಂಗಣದ ಮುಂಭಾಗ ನೆರೆದಿದ್ದರು ಡಿಎನ್‍ಎ ಈವೆಂಟ್ ಮ್ಯಾನೇಜ್‍ಮೆಂಟ್ ನೆಟ್‍ವಕ್ರ್ಸ್ ಆನ್‍ಲೈನ್‍ನಲ್ಲಿ ಉಚಿತ ಟಿಕೆಟ್ ಪಡೆಯುವಂತೆ ಸೂಚಿಸಿದೆ. 21 ಗೇಟ್‍ಗಳ ಪೈಕಿ 3 ಗೇಟ್‍ಗಳನ್ನು ಮಾತ್ರ ತೆರೆಯಲಾಗಿದೆ. ದುರ್ಘಟನೆಗೆ ಆರ್‍ಸಿಬಿ, ಡಿಎನ್‍ಎ ಮತ್ತು ಕೆಎಸ್‍ಸಿಎ ಕಾರಣ ಎಂದು ಬಲವಾಗಿ ಆಕ್ಷೇಪಿಸಿದರು.

ಸಾಕ್ಷ್ಯ ನಾಶ, ಅಭಿಮಾನಿಗಳಿಗೆ ಸರಿಯಾದ ರೀತಿಯಲ್ಲಿ ಉಚಿತ ಟಿಕೆಟ್ ಮಾಹಿತಿ ನೀಡದಿರುವುದು; ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ, ಅಗ್ನಿಶಾಮಕ ದಳದ ವ್ಯವಸ್ಥೆ, ಬೆಳವಣಿಗೆಗಳ ಕುರಿತು ಜನರಿಗೆ ನಿರಂತರ ಮಾಹಿತಿ ಕೊರತೆ ಸೇರಿದಂತೆ 12 ಕಾರಣಗಳ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧನದಲ್ಲಿ ಯಾವುದೇ ತೆರನಾದ ಅಕ್ರಮ ನಡೆದಿಲ್ಲವಾದ್ದರಿಂದ ಅವರನ್ನು ಬಿಡುಗಡೆ ಮಾಡಬಾರದು ಎಂದು ಕೋರಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದ ನಂತರ ಆರೋಪಿಗಳನ್ನು ಬಂಧಿಸಲಾಗಿದೆ. ದೀಪಕ್ ಮಹಾಜನ್ ವರ್ಸಸ್ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ವ್ಯಕ್ತಿ ಸ್ವಾತಂತ್ರ್ಯ ನಿರಾಕರಿಸುವುದು ಬಂಧನವಾಗುತ್ತದೆ. ಇಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವುದು ಬಂಧನವೇ ಆಗುತ್ತದೆ. ಆ ಸಂದರ್ಭದಲ್ಲಿ ಬಂಧನದ ಆಧಾರ ನೀಡಬೇಕಿತ್ತು. ಇದನ್ನು ನೀಡದಿರುವುದು ಬಂಧನವನ್ನು ಅಕ್ರಮವಾಗಿಸುತ್ತದೆ ಎಂದರು.

ಸರ್ಕಾರದ ಪರ ಇಂದು ವಾದ ಮುಂದುವರೆಸಿದ ಎಜಿ ಶಶಿಕಿರಣ್ ಶೆಟ್ಟಿ, ಅರ್ಜಿದಾರರು ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದಾರೆ. ಆರೋಪಿಗಳಿಗೆ ಬಂಧನದ ಲಿಖಿತ ಕಾರಣಗಳನ್ನ ಒದಗಿಸಲಾಗಿದೆ ಸಿಎಂ ಸೂಚನೆ ಮೇರೆಗೆ ಬಂಧನವಾಗಿದೆ ಎಂಬುದು ಸರಿಯಲ್ಲ ಎಂದು ಉಲ್ಲೇಖಿಸಿದರು.

ವಾದ ಪ್ರತಿವಾದ ಆಲಿಸಿದ ನ್ಯಾ.ಎಸ್.ಆರ್ ಕೃಷ್ಣಕುಮಾರ್ ಅವರ ಪೀಠವು ಮಧ್ಯಂತರ ಆರ್ಜಿ ಬಗ್ಗೆ ಆದೇಶವನ್ನ ಜೂ.12 ಮಧ್ಯಾಹ್ನ 2.30ಕ್ಕೆ ಕಾಯ್ದಿರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News