×
Ad

'ಸಹಯೋಗ' ಪೋರ್ಟಲ್ ಆರಂಭಿಸಿರುವ ಕೇಂದ್ರದ ಕ್ರಮ ಪ್ರಶ್ನಿಸಿದ್ದ ಎಕ್ಸ್ ಕಾರ್ಪ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸಾಮಾಜಿಕ ಮಾಧ್ಯಮದ ನಿಯಂತ್ರಣ ಅಗತ್ಯ ಎಂದ ನ್ಯಾಯಾಲಯ

Update: 2025-09-24 20:25 IST

Photo credit: PTI

ಬೆಂಗಳೂರು: ಮಾಹಿತಿ ನಿರ್ಬಂಧಿಸುವ ಸಂಬಂಧ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಲು 'ಸಹಯೋಗ' ಪೋರ್ಟಲ್‌ ಆರಂಭಿಸಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಎಕ್ಸ್‌ ಕಾರ್ಪ್‌ (ಟ್ವಿಟರ್) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್,

ಸಾಮಾಜಿಕ ಮಾಧ್ಯಮದ ನಿಯಂತ್ರಣ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಎಕ್ಸ್ ಕಾರ್ಪ್ ಸಲ್ಲಿಸಿದ್ದ ಅರ್ಜಿ ಕುರಿತು ವಾದ ಪ್ರತಿವಾದ ಆಲಿಸಿ, ಜುಲೈ 29ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿದ್ದು, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಸಂವಿಧಾನದ 19ನೇ ಪರಿಚ್ಛೇದವು ತನ್ನ ಭರವಸೆಯಲ್ಲಿ ಪ್ರಕಾಶಮಾನವಾಗಿದೆ. ಆದರೆ, ನಾಗರಿಕರಿಗೆ ಮಾತ್ರ ನೀಡಲಾದ ಹಕ್ಕುಗಳ ಸನ್ನದಾಗಿ ಉಳಿದಿದೆ. ಭಾರತೀಯ ನಾಗರಿಕನಲ್ಲದ ಅರ್ಜಿದಾರ ಎಕ್ಸ್‌ ಕಾರ್ಪ್‌ ಸಂಸ್ಥೆಯು ಪರಿಚ್ಛೇದ 19ರ ಅಡಿಯಲ್ಲಿ ಆಶ್ರಯ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್ ಆದೇಶವೇನು?

ಅರ್ಜಿದಾರ ಸಂಸ್ಥೆಯು ತನ್ನ ಮೂಲಸ್ಥಾನವಾದ ಅಮೆರಿಕದಲ್ಲಿ ನಿಯಂತ್ರಣ ವ್ಯವಸ್ಥೆಗೆ ಒಳಪಟ್ಟಿದೆ. ಅಲ್ಲಿನ ವ್ಯಾಪ್ತಿಯಲ್ಲಿರುವ ಟ್ವೀಟ್‌ ತೆಗೆಯುವ ಕಾನೂನಿನ ಅಡಿ ಉಲ್ಲಂಘನೆಯನ್ನು ಕ್ರಿಮಿನಲ್‌ ಚಟುವಟಿಕೆ ಎಂದು ನಿರ್ಧರಿಸಲಾಗುತ್ತದೆ ಎಂದು ಅಲ್ಲಿ ಆದೇಶ ಪಾಲಿಸುತ್ತಿದೆ. ಆದರೆ, ಭಾರತದಲ್ಲಿ ಆ ದೇಶವನ್ನು ಪಾಲಿಸಲು ಎಕ್ಸ್‌ ಕಾರ್ಪ್‌ ನಿರಾಕರಿಸುತ್ತಿದೆ. ಇದು ಮುಖಗೇಡಿತನ (Sans Countenance) ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ನಮ್ಮ ರಾಷ್ಟ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಬಯಸುವ ಪ್ರತಿಯೊಂದು ವೇದಿಕೆಯೂ ಸ್ವಾತಂತ್ರ್ಯವನ್ನು ಜವಾಬ್ದಾರಿಯೊಂದಿಗೆ ತೆಗೆದುಕೊಳ್ಳಬೇಕು ಮತ್ತು ಪ್ರವೇಶದ ಸವಲತ್ತು ಅದರೊಂದಿಗೆ ಹೊಣೆಗಾರಿಕೆಯ ಗಂಭೀರ ಕರ್ತವ್ಯವನ್ನು ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದಿರುವ ನ್ಯಾಯಾಲಯ, ಆಧುನಿಕ ವಿಚಾರಗಳ ದುಂಡುಕಲೆಮನೆಯಾಗಿರುವ (Amphitheatre) ಸಾಮಾಜಿಕ ಮಾಧ್ಯಮವನ್ನು ಅರಾಜಕ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಬಿಡಲಾಗುವುದಿಲ್ಲ. ವಿಷಯದ ನಿಯಂತ್ರಣವು ಘನತೆಯನ್ನು ರಕ್ಷಿಸಲು ಮತ್ತು ಮಹಿಳೆಯರ ವಿರುದ್ಧದ ಅಪರಾಧ ನಿರ್ಬಂಧಿಸಲು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಅನಾದಿ ಕಾಲದಿಂದಲೂ ಮಾಹಿತಿ ಮತ್ತು ಸಂಹವನವು ನಿಯಂತ್ರಣಕ್ಕೆ ಒಳಪಟ್ಟಿದ್ದು, ಮಾಹಿತಿದಾರರಿಂದ ಅಂಚೆ ಕಾಲದವರಿಗೆ, ಈಗ ವಾಟ್ಸಾಪ್‌, ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ಚಾಟ್‌ ಎಲ್ಲವೂ ಸ್ಥಳೀಯ ಮತ್ತು ಜಾಗತಿಕವಾಗಿ ನಿಯಂತ್ರಣಕ್ಕೆ ಒಳಪಟ್ಟಿವೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಎಕ್ಸ್ ಕಾರ್ಪ್ ಆಕ್ಷೇಪವೇನು?

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪೊಲೀಸರನ್ನೂ ಒಳಗೊಂಡಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಸೆಕ್ಷನ್‌ 69ಎ ಮೀರಿ ಸೆಕ್ಷನ್‌ 79(3)(ಬಿ) ಅಡಿ ಮಾಹಿತಿ ನಿರ್ಬಂಧಿಸಲು ನಿರ್ದೇಶಿಸಿದೆ ಎಂದು ಆರೋಪಿಸಿದ್ದ ಎಕ್ಸ್‌ ಕಾರ್ಪ್, ನಿರ್ಬಂಧ ಆದೇಶ ಮಾಡಲು ಸಿದ್ಧ ಮಾದರಿಯನ್ನೂ ನೀಡಿದೆ. ಇದು ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘನೆ ಎಂದು ಆಕ್ಷೇಪಿಸಿತ್ತು.

ಜತೆಗೆ, ಸೆಕ್ಷನ್‌ 79(3)(ಬಿ) ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ನಿರ್ಬಂಧ ಆದೇಶ ಮಾಡಲು ಅನುಮತಿಸುವ ಕೇಂದ್ರ ಗೃಹ ಇಲಾಖೆ ರೂಪಿಸಿರುವ ಸಹಯೋಗ ಪೋರ್ಟಲ್‌ ಅನ್ನೂ ಎಕ್ಸ್‌ ಪ್ರಶ್ನಿಸಿತ್ತು. ಸೆಕ್ಷನ್‌ 69ಎಗೆ ಪರ್ಯಾಯವಾಗಿ ಸಹಯೋಗ ಪೋರ್ಟಲ್‌ ವ್ಯವಸ್ಥೆ ರೂಪಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆಕ್ಷೇಪಿಸಿತ್ತು.

ಈ ಹಿನ್ನೆಲೆಯಲ್ಲಿ ಸೆಕ್ಷನ್‌ 79(3)(ಬಿ) ಅಡಿ ಮಾಹಿತಿ ನಿರ್ಬಂಧ ಆದೇಶ ಮಾಡಲು ಸರ್ಕಾರಕ್ಕೆ ಅವಕಾಶವಿಲ್ಲ. ಇದು ವಿಶೇಷವಾಗಿ ಸೆಕ್ಷನ್‌ 69Aರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಆದೇಶಿಸಬೇಕು. ಆಕ್ಷೇಪಾರ್ಹ ಅಧಿಸೂಚನೆ ರದ್ದುಪಡಿಸಬೇಕು ಮತ್ತು ಅಕ್ರಮ ನಿರ್ಬಂಧ ಆದೇಶ ಮತ್ತು ಪೋರ್ಟಲ್‌ ಸೆನ್ಸಾರ್‌ಶಿಪ್‌ ಸಂಬಂಧ ಎಕ್ಸ್‌ ವಿರುದ್ಧ ಪೂರ್ವಾಗ್ರಹಪೀಡಿತ ಕ್ರಮಕೈಗೊಳ್ಳದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಬೇಕು. ಸೆಕ್ಷನ್‌ 69Aಗೆ ವಿರುದ್ಧವಾಗಿ ಹೊರಡಿಸುವ ಆದೇಶ ಅನುಪಾಲಿಸದಿರುವುದಕ್ಕೆ ಎಕ್ಸ್‌ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಈ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News