ಸೆಣಬಿನ ಚೀಲದಲ್ಲಿ ಸಕ್ಕರೆ ಪ್ಯಾಕಿಂಗ್; ಕೇಂದ್ರದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಶೇ.20 ಪ್ರಮಾಣವನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿ ತುಂಬಬೇಕು ಎಂಬ ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್, ರಾಜ್ಯದ ಲೆಕ್ಕವಿಲ್ಲದಷ್ಟು ಚಟುವಟಿಕೆ ನಿಯಂತ್ರಿಸುವ ನೀತಿಗಳ ಆಡಳಿತಕ್ಕೆ ಸರ್ವೋಚ್ಚ ಸಲಹೆಗಾರನ ಪಾತ್ರವನ್ನು ನ್ಯಾಯಾಧೀಶರು ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಜವಳಿ ಸಚಿವಾಲಯ 2023ರ ಡಿಸೆಂಬರ್ 26 ಹಾಗೂ 2024ರ ಜೂನ್ 28ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಸ್ಥೆ-ಕರ್ನಾಟಕ ಹಾಗೂ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಎತ್ತಿಹಿಡಿದಿದೆ.
ಹೈಕೋರ್ಟ್ ಆದೇಶವೇನು?
ಸೆಣಬಿನ ಪ್ಯಾಕೇಜಿಂಗ್ ಉತ್ಪನ್ನಗಳ (ಪ್ಯಾಕೇಜಿಂಗ್ ಉತ್ಪನ್ನಗಳಲ್ಲಿನ ಕಡ್ಡಾಯ ಬಳಕೆ) ಕಾಯ್ದೆ 1987ರ ಅಡಿ ಬರುವ ಸಲಹಾ ಸಮಿತಿ ಮತ್ತು ಸೆಣಬಿನ ಬಾಚಿಂಗ್ ಎಣ್ಣೆಯಲ್ಲಿ (Jute Batching Oil) ಕ್ಯಾನ್ಸರ್‌ಕಾರಕ ಅಂಶ ಇರುವ ಕುರಿತು ತಜ್ಞರು ಪರಿಶೀಲಿಸಲಿದ್ದಾರೆ. 1987ರ ಕಾಯ್ದೆಯನ್ನು ಸೆಣಬು ಕ್ಷೇತ್ರವನ್ನು ಉತ್ತೇಜಿಸಲು ರೂಪಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.