ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬನನ್ನು ಸುಪ್ರೀಂ ಕೋರ್ಟ್ ನ 'ನಕಲಿ' ಆದೇಶ ಬಳಸಿ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಿದ ಪ್ರಕರಣದಲ್ಲಿ ಕಾರಾಗೃಹ ಇಲಾಖೆಯ ಡಿಐಜಿ ಎಂ. ಸೋಮಶೇಖರ್ (50) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೈದಿಯ ಬಿಡುಗಡೆಗೆ ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಆರೋಪವೂ ಅವರ ವಿರುದ್ಧ ಕೇಳಿಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಬೆಳಗಾವಿಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಉತ್ತರ ವಲಯದ ಉಪ ಮಹಾನಿರೀಕ್ಷಕರಾಗಿ (DIG) ಕಾರ್ಯನಿರ್ವಹಿಸುತ್ತಿರುವ ಸೋಮಶೇಖರ್ ಅವರನ್ನು ಅಕ್ಟೋಬರ್ 4ರಂದು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಅವರನ್ನು ಅಕ್ಟೋಬರ್ 9ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2004ರ ಜುಲೈ 12ರಂದು ಚಿಕ್ಕಪೇಟೆ ಪೊಲೀಸರು ದಾಖಲಿಸಿದ್ದ ಹಣಕ್ಕಾಗಿ ಅಪಹರಣ ಪ್ರಕರಣದಲ್ಲಿ ಶಂಕರ್ ಆರ್ಮುಗಂಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್–1 ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿತ್ತು. ಶಿಕ್ಷೆ ಪ್ರಶ್ನಿಸಿ ದೋಷಿಯು ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಗಳು ವಿಫಲವಾಗಿದ್ದವು.

ಆದರೂ 2018ರ ನವೆಂಬರ್ 13ರಂದು ಶಂಕರ್ ನನ್ನು ಪರಪ್ಪನ ಅಗ್ರಹಾರದ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. ಶಂಕರ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ ಹಾಗೂ ಆತನನ್ನು 2018ರ ನವೆಂಬರ್ 2ರಂದು ಬಿಡುಗಡೆ ಮಾಡುವಂತೆ ಆದೇಶಿಸಿದೆ ಎಂಬಂತೆ ನಕಲಿ ಆದೇಶ ಸಿದ್ಧಪಡಿಸಲಾಗಿತ್ತು. ಇದೇ ನಕಲಿ ದಾಖಲೆಯ ಆಧಾರದಲ್ಲಿ ಶಂಕರ್ ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಆ ಸಂದರ್ಭದಲ್ಲಿ ಕಾರಾಗೃಹ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ (SDA) ಕಾರ್ಯನಿರ್ವಹಿಸುತ್ತಿದ್ದ ಹಾಗೂ ಪ್ರಸ್ತುತ ಕೈದಿಗಳ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ (FDA) ಕೆಲಸ ಮಾಡುತ್ತಿರುವ ಶ್ರೀಕಾಂತ್ ಎಸ್. ಅವರು ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆ ವೇಳೆ ಸೋಮಶೇಖರ್ ಅವರು ಬೆಂಗಳೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದರು. ನಕಲಿ ದಾಖಲೆಯ ಆಧಾರದಲ್ಲಿ ಶಂಕರ್ ಬಿಡುಗಡೆಗೊಂಡಿದ್ದನು.

ಶಂಕರ್ ನ ಬಿಡುಗಡೆಗೆ ಬಳಸಲಾದ ದಾಖಲೆಗಳ ಸತ್ಯಾಸತ್ಯತೆ ಕುರಿತು ಆತನ ವಿರುದ್ಧ ಪ್ರಕರಣ ದಾಖಲಾದ ಬಳಿಕ ಈ ಅಕ್ರಮ ಜಾಲ ಬೆಳಕಿಗೆ ಬಂದಿದೆ. ಈ ಕುರಿತು ಈಗಾಗಲೇ ತನಿಖೆ ನಡೆಸಲಾಗಿದೆ ಎಂದು ಶಂಕರ್ ಹೇಳಿಕೊಂಡಿದ್ದು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾನೆ. ತನ್ನನ್ನು ಪದೇ ಪದೇ ವಿವಾದಕ್ಕೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದೂ ಆತ ಆರೋಪಿಸಿದ್ದಾನೆ.

ಶಂಕರ್ ನ ಬಿಡುಗಡೆಗೆ ನಕಲಿ ನ್ಯಾಯಾಂಗ ದಾಖಲೆಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಬೆಂಗಳೂರು ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕರು ಮೇ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ದಾಖಲೆಗಳನ್ನು ನಕಲಿ ಮಾಡಿದ ಆರೋಪದ ಮೇಲೆ ಪೊಲೀಸರು ಶಂಕರ್ ಮತ್ತು ಶ್ರೀಕಾಂತ್ ಇಬ್ಬರನ್ನೂ ಬಂಧಿಸಿದ್ದರು.

ಪೊಲೀಸರು ವಿಚಾರಣೆ ನಡೆಸಿದಾಗ, ತಮ್ಮ ಪತಿಯ ಬಿಡುಗಡೆಗೆ ಅಂದಿನ ಮುಖ್ಯ ಅಧೀಕ್ಷಕ ಸೋಮಶೇಖರ್ ನೆರವಾಗಿದ್ದರು ಎಂದು ಶಂಕರ್ ಅವರ ಪತ್ನಿ ಆರೋಪಿಸಿದ್ದಾರೆ. ಅಲ್ಲದೆ, ಪತಿಯ ಬಿಡುಗಡೆಗೆ ಪ್ರತಿಯಾಗಿ ಸೋಮಶೇಖರ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತಹ ‘ಒಪ್ಪಂದ’ವನ್ನು ತಮ್ಮ ಪತಿ ಮಾಡಿಕೊಂಡಿದ್ದರು ಎಂದೂ ಅವರು ಆರೋಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆ ಮುಂದುವರಿದಂತೆ ಡಿಐಜಿ ಸೋಮಶೇಖರ್ ಅವರು ‘ತನಿಖೆಗೆ ಸಹಕರಿಸಲಿಲ್ಲ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮುಚ್ಚಿಟ್ಟರು’ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಕೃಪೆ: Deccan Herald

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor