×
Ad

ರೋಹಿಣಿ ಸಿಂಧೂರಿ ವಿರುದ್ಧದ ಸಾಮಾಜಿಕ ಜಾಲತಾಣ ಪೋಸ್ಟ್‌ ತೆಗೆದುಹಾಕುವಂತೆ ಐಪಿಎಸ್‌ ಅಧಿಕಾರಿ ರೂಪಾಗೆ ಸುಪ್ರೀಂ ಸೂಚನೆ

Update: 2023-12-15 12:18 IST

ರೋಹಿಣಿ ಸಿಂಧೂರಿ / ಡಿ. ರೂಪಾ

ಹೊಸದಿಲ್ಲಿ: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಡಿರುವ ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರಿಗೆ ಸುಪ್ರೀಂ ಕೋರ್ಟ್‌ ಗುರುವಾರ ಆದೇಶ ನೀಡಿದೆ.

ಸಿಂಧೂರಿ ಅವರು ದಾಖಲಿಸಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ರೂಪಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಮೇಲಿನ ಆದೇಶ ನೀಡಿದೆ.

ಕರ್ನಾಟಕದ ಇಬ್ಬರು ಮಹಿಳಾ ಅಧಿಕಾರಿಗಳಿಗೂ ಈ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸುವಂತೆ ಡಿಸೆಂಬರ್‌ 13ರಂದು ನ್ಯಾಯಾಲಯ ಸಲಹೆ ನೀಡಿತ್ತು. ಆದರೆ ಮಾತುಕತೆ ಮತ್ತು ಸಂಧಾನ ಸಾಧ್ಯವಿಲ್ಲ ಎಂದು ಇಬ್ಬರೂ ಅಧಿಕಾರಿಗಳು ವಿಚಾರಣೆ ವೇಳೆ ಹೇಳಿದ್ದರು.

ಗುರುವಾರ ಈ ವಿಚಾರ ಪ್ರಸ್ತಾಪಿಸಿದ ನ್ಯಾಯಪೀಠ ಇಬ್ಬರು ಅಧಿಕಾರಿಗಳೂ ಸೌಹಾರ್ದಯುತವಾಗಿ ಪರಿಹರಿಸಲು ಮುಂದಾಗದೇ ಇರುವುದಕ್ಕೆ ತನ್ನ ನಿರಾಸೆ ವ್ಯಕ್ತಪಡಿಸಿದೆ.

“ಐಎಎಸ್‌, ಐಪಿಎಸ್‌ ಅಧಿಕಾರಿಗಳು ಈ ರೀತಿ ಕಚ್ಚಾಡಿಕೊಂಡರೆ ಆಡಳಿತ ಹೇಗೆ ಸಾಧ್ಯ,” ಎಂದು ನ್ಯಾಯಮೂರ್ತಿಗಳಾದ ಎಸ್‌ ಓಕಾ ಮತ್ತು ಪಂಕಜ್‌ ಮಿತ್ತಲ್‌ ಅವರ ಪೀಠ ಪ್ರಶ್ನಿಸಿದೆ.

ಐಪಿಎಸ್‌ ಅಧಿಕಾರಿ ರೂಪಾ ಅವರು ರೋಹಿಣಿ ಅವರ ಖಾಸಗಿ ಚಿತ್ರಗಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಇಬ್ಬರು ಮಹಿಳಾ ಅಧಿಕಾರಿಗಳ ನಡುವೆ ವಿವಾದ ಇನ್ನಷ್ಟು ತೀವ್ರಗೊಂಡಿತ್ತು. ರೂಪಾ ಅವರು ರೋಹಿಣಿ ವಿರುದ್ಧ ಭ್ರಷ್ಟಾಚಾರ ಸೇರಿದಂತೆ 19 ಆರೋಪ ಹೊರಿಸಿದ್ದಾರೆ ಹಾಗೂ ತನಿಖೆ ನಡೆಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿದ್ದರು.

ಇದರ ಬೆನ್ನಲ್ಲೇ ಸಿಂಧೂರಿ ಅವರು ರೂಪಾ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು.

ರೂಪಾ ತಾವು ತೆಗೆದುಹಾಕಿದ ಸಾಮಾಜಿಕ ಜಾಲತಾಣ ಪೋಸ್ಟ್‌ಗಳ ಕುರಿತು ವಿವರ ನೀಡುವಂತೆ ನ್ಯಾಯಾಲಯ ಹೇಳಿದೆ. ಒಂದು ವೇಳೆ ಯಾವುದೇ ಕಾರಣಕ್ಕೂ ಪೋಸ್ಟ್‌ಗಳನ್ನು ಅಳಿಸಲು ಸಾಧ್ಯವಾಗದೇ ಇದ್ದರೆ ರೋಹಿಣಿ ವಿರುದ್ಧದ ಹೇಳಿಕೆಗಳನ್ನು ವಾಪಸ್‌ ಪಡೆದ ಕುರಿತು ಸ್ಪಷ್ಟೀಕರಣ ನೀಡಿ ಒಂದು ಪೋಸ್ಟ್‌ ಹಾಕಬೇಕು, ಇಡೀ ವಿವಾದ ಅಂತ್ಯಗೊಳಿಸುವುದು ನ್ಯಾಯಾಲಯದ ಉದ್ದೇಶ ಎಂದು ನ್ಯಾಯಪೀಠ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News