ಎಸೆಸೆಲ್ಸಿ ಪರೀಕ್ಷೆ-3ರಲ್ಲಿ ಶೇ.25.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ. 26: 2024ರ ಎಸೆಸೆಲ್ಸಿ ಪರೀಕ್ಷೆ-3ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿದ್ದು, ಪರೀಕ್ಷೆಯಲ್ಲಿ 25.88ರಷ್ಟು ಫಲಿತಾಂಶ ಬಂದಿದೆ. ಆ.13ರಿಂದ 16ರವರೆಗೆ ರಾಜ್ಯದ 21 ಶೈಕ್ಷಣಿಕ ಜಿಲ್ಲೆಗಳ 62 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಒಟ್ಟು 13,055 ಮೌಲ್ಯಮಾಪಕರು ಪಾಲ್ಗೊಂಡಿದ್ದರು.
ರಾಜ್ಯಾದ್ಯಂತ 410 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ 97,952 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 25,347 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳು ಫಲತಾಂಶವನ್ನು https://karresults.nic.in/ ಹಾಗೂ kseab.karnataka.gov.in ನೋಡಬಹುದು.
ಪರೀಕ್ಷೆಗೆ 67,729 ಬಾಲಕರು ಹಾಜರಾಗಿದ್ದು, 16,764 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.24.75ರಷ್ಟು ಫಲಿತಾಂಶವು ಪ್ರಕಟವಾಗಿದೆ. 30,223 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, 8,583 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.28.4ರಷ್ಟು ಫಲಿತಾಂಶ ದಾಖಲಾಗಿದೆ. ಸರಕಾರಿ ಶಾಲೆಗಳ ಫಲಿತಾಂಶವು ಶೇ.24.3, ಅನುದಾನಿತ ಶಾಲೆಗಳ ಫಲಿತಾಂಶ ಶೇ.25.19 ಹಾಗೂ ಅನುದಾನರಹಿತ ಶಾಲೆಗಳ ಫಲಿತಾಂಶವು ಶೇ.30.66ರಷ್ಟು ಬಂದಿದೆ.
ನಗರ ಪ್ರದೇಶದಲ್ಲಿ 59,896 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, 14,885 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.24.85ರಷ್ಟು ಫಲಿತಾಂಶ ದಾಖಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 38,056 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, 10,462 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.27.49ರಷ್ಟು ಫಲಿತಾಂಶ ದಾಖಲಾಗಿದೆ.
ಸ್ಕ್ಯಾನ್ ಪ್ರತಿ ಪಡೆಯಲು ಆ.30 ಕೊನೆ ದಿನ: ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರತಿಗಳನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ. ಸ್ಕ್ಯಾನ್ ಪ್ರತಿ, ಮರು ಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಮಂಡಳಿಯ ವೆಬ್‍ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆ.26ರಿಂದ 30ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಆ.31ರವರಗೆ ಶುಲ್ಕ ಪಾವತಿಸಬೇಕು. ಉತ್ತರ ಪತ್ರಿಕೆಗಳ ಮರುಎಣಿಕೆಗೆ ಮತ್ತು ಮರು ಮೌಲ್ಯಮಾಪನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆ.31 ರಿಂದ ಸೆ.4ರವರೆಗೆ ಅರ್ಜಿ ಸಲ್ಲಿಸಬಹುದು. ಸೆ.5ರೊಳಗಾಗಿ ಶುಲ್ಕವನ್ನು ಪಾವತಿಬಹುದಾಗಿದೆ.
ಇನ್ನೂ ನೇರವಾಗಿ ಮರು ಎಣಿಕೆಗಾಗಿ ಭೌತಿಕವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಬದಲಿಗೆ ಆನ್‍ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಿದೆ. ಮರು ಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ಪಡೆಯಬೇಕು.