×
Ad

ಬೆಂಗಳೂರು: ಗಂಡನ ವಿರುದ್ಧ ಸೇಡು ತೀರಿಸಲು ಆತನ ಫೋನ್‌ನಿಂದ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ ಮಹಿಳೆ; ಪ್ರಕರಣ ದಾಖಲು

Update: 2023-12-07 16:54 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ತನ್ನ ಸೆಲ್‌ ಫೋನ್‌ ಅನ್ನು ಮುರಿದ ತನ್ನ ಗಂಡನ ವಿರುದ್ಧ ಸೇಡು ತೀರಿಸಲು ಆತನ ಮೊಬೈಲ್‌ ಫೋನಿನಿಂದ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ 32 ವರ್ಷದ ಮಹಿಳೆಯ ವಿರುದ್ಧ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಮಹಿಳೆ ವಿಧ್ಯಾರಾಣಿ ಆನ್‌ಲೈನ್‌ ಮೂಲಕ ಸಂಪರ್ಕ ಸಾಧಿಸಿದ ಪುರುಷರೊಂದಿಗೆ ನಡೆಸಿದ ಸಂಭಾಷಣೆಗಳನ್ನು ನೋಡಿದ್ದ ಆಕೆಯ ಗಂಡ ಆಕೆಯ ಫೋನ್‌ ಮುರಿದು ಹಾಕಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಆಕೆ ಈ ವಿಚಾರವನ್ನು ತನ್ನ ಬಿಹಾರ ಮೂಲದ ಸ್ನೇಹಿತನಿಗೆ ತಿಳಿಸಿದಾಗ, ಮಹಿಳೆಯ ಗಂಡನನ್ನು ಸಿಲುಕಿಸಿ ಹಾಕಲು ಆತ ತನ್ನ ಮತ್ತೊಬ್ಬ ಸ್ನೇಹಿತನೊಂದಿಗೆ ಒಂದು ಯೋಜನೆ ರೂಪಿಸಿದ. ಮಹಿಳೆ ಮತ್ತೊಂದು ಫೋನ್‌ ಖರೀದಿಸಿದ ನಂತರ ಆಕೆಯ ಸ್ನೇಹಿತ ಆಕೆಯ ಫೋನಿಗೆ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದ ಮತ್ತು ಅದನ್ನು ಆಕೆಯ ಗಂಡನ ಫೋನ್‌ನಿಂದ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಕಳಿಸುವಂತೆ ಸೂಚಿಸಿದ.

ಆತನ ಸೂಚನೆಯಂತೆಯೇ ಮಹಿಳೆ ಡಿಸೆಂಬರ್‌ 3ರಂದು ತನ್ನ ಗಂಡನ ಫೋನ್‌ ಬಳಸಿ ಆ ಸಂದೇಶ ರವಾನಿಸಿದ್ದಳು. ಅದರಲ್ಲಿ ಸರಣಿ ಆರ್‌ಡಿಎಕ್ಸ್‌ ಬಾಂಬ್‌ ಸ್ಫೋಟಗಳು ನಡೆಯಲಿವೆ ಎಂಬ ಸಂದೇಶವಿತ್ತು. ಸಂದೇಶ ಕಳಿಸಿದ ಕೂಡಲೇ ಆಕೆ ಅದನ್ನು ತನ್ನ ಗಂಡನ ಫೋನ್‌ನಿಂದ ಅಳಿಸಿದ್ದಳು.

ನಂತರ ಆ ಬೆದರಿಕೆ ಸಂದೇಶದ ಜಾಡು ಹಿಡಿದು ಪೊಲೀಸರು ಮಹಿಳೆಯ ಗಂಡನನ್ನು ವಶಕ್ಕೆ ಪಡೆದು ಪ್ರಶ್ನಿಸಿದ್ದರು. ನಂತರ ಸಂಶಯಗೊಂಡು ಆತನ ಹೆಂಡತಿಯನ್ನೂ ಪ್ರಶ್ನಿಸಿದಾಗ ಆಕೆ ನಿಜ ಸಂಗತಿ ಬಾಯ್ಬಿಟ್ಟಿದ್ದಳು.

ಮಹಿಳೆ ಮತ್ತು ಆಕೆಗೆ ಈ ಯೋಜನೆ ರೂಪಿಸಿಕೊಟ್ಟ ಆಕೆಯ ಸಹವರ್ತಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳನ್ವಯ ಹಾಗೂ ಐಟಿ ಕಾಯಿದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News