‘ಕಾಶಿ ದರ್ಶನ’ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ಯೋಜನೆಯಡಿ ನೀಡುತ್ತಿರುವ ಸಹಾಯಧನ 5 ಸಾವಿರ ರೂ.ನಿಂದ 7,500 ರೂ.ಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ’ ಎಂದು ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿರುವ ಅವರು, ‘ರಾಜ್ಯ ಸರಕಾರದಿಂದ ರಿಯಾಯಿತಿ ದರದ ಕಾಶಿ ದರ್ಶನ ಯೋಜನೆಯಡಿ ಸಾಮಾನ್ಯ ಭಕ್ತರು ಕಾಶಿಯಾತ್ರೆ ಕೈಗೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗುವುದು. ಕಾಶಿಯಾತ್ರೆ ಸಹಾಯಧನ ಹೆಚ್ಚಿಸುವ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
‘ಒಟ್ಟು 8ದಿನಗಳ ಕಾಶಿ ಪ್ರವಾಸ ಇದಾಗಿದ್ದು, ಒಬ್ಬರಿಗೆ 20 ಸಾವಿರ ರೂ.ವೆಚ್ಚವಾಗಲಿದೆ. ಆ ಪೈಕಿ 5 ಸಾವಿರ ರೂ.ಗಳನ್ನು ರಾಜ್ಯ ಸರಕಾರದಿಂದ ಸಹಾಯಧನ ಸಿಗಲಿದೆ. ಈ ಪ್ಯಾಕೇಜ್‍ನಲ್ಲಿ ಪ್ರಯಾಣ, ಊಟ, ವಸತಿ ವ್ಯವಸ್ಥೆ, ಧಾರ್ಮಿಕ ಕ್ಷೇತ್ರಗಳ ವೆಚ್ಚವೂ ಸೇರಿದೆ’ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.