×
Ad

ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಹಸ್ತಾಂತರ : 20 ಕೋಟಿ ರೂ.ಗೂ ಅಧಿಕ ಮೊತ್ತದ ನಗದು, ಚಿನ್ನಾಭರಣ ವಶ

Update: 2025-08-23 20:36 IST

ಬೆಂಗಳೂರು, ಆ.23 : ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ತೊಡಗಿರುವ ಆರೋಪದ ಮೇಲೆ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಯನ್ನು ಜಾರಿ ನಿರ್ದೇಶನಾಲಯ(ಈಡಿ) ಅಧಿಕಾರಿಗಳು, ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಒಪ್ಪಿಸಿದ್ದಾರೆ.

ಆ.22ರಂದು ಸಿಕ್ಕಿಂನ ಗ್ಯಾಂಗ್ಟಕ್‍ನಲ್ಲಿ ಕೆ.ಸಿ.ವೀರೇಂದ್ರ ಅವರನ್ನು ಬಂಧಿಸಿದ್ದು, ಶನಿವಾರ ಸ್ಥಳೀಯ ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಹಾಜಪಡಿಸಲಾಗಿತ್ತು. ವಿಚಾರಣೆಯ ನಂತರ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಹಾಜರುಪಡಿಸಲು ಹಸಾಂತರಿಸಲಾಗಿದೆ.

ಆರೋಪಿಗಳಿಂದ ಸುಮಾರು 1ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ, ಅಂದಾಜು 6ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು, ಸುಮಾರು 10ಕೆ.ಜಿ. ಬೆಳ್ಳಿ ವಸ್ತುಗಳು ಮತ್ತು ನಾಲ್ಕು ವಾಹನಗಳು ಸೇರಿ 12 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, 17 ಬ್ಯಾಂಕ್ ಖಾತೆಗಳು ಮತ್ತು 2 ಬ್ಯಾಂಕ್ ಲಾಕರ್‍ಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಕೆ.ಸಿ.ವೀರೇಂದ್ರ ಹಾಗೂ ಅವರ ಸೋದರ ಕೆ.ಸಿ. ನಾಗರಾಜ್‍ಗೆ ಸೇರಿದ ಆಸ್ತಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆ.22 ಮತ್ತು ಆ.23ರಂದು ಶಾಸಕ ಕೆ.ಸಿ.ವೀರೇಂದ್ರ, ಅವರ ಸೋದರರಿಗೆ ಸಂಬಂಧಿಸಿದ ಚಿತ್ರದುರ್ಗ ಜಿಲ್ಲೆಯ 6, ಬೆಂಗಳೂರಿನ 10, ಗೋವಾದ 8, ಜೋಧ್‍ಪುರದ 3, ಮುಂಬೈನ 2, ಸಿಕ್ಕಿಂನ ಗ್ಯಾಂಗ್‍ಟೋಕ್‍ನ 1 ಹಾಗೂ ಹುಬ್ಬಳಿಯ 1 ಸೇರಿದಂತೆ ದೇಶದ 31 ಸ್ಥಳಗಳಲ್ಲಿ ಈಡಿ ಅಧಿಕಾರಿಗಳ ತಂಡವು ಶೋಧ ನಡೆಸಿತ್ತು. ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊ ಸೇರಿದಂತೆ 5 ಕ್ಯಾಸಿನೊಗಳನ್ನು ಪರಿಶೀಲನೆ ಮಾಡಲಾಗಿತ್ತು.

ಕೆ.ಸಿ.ವೀರೇಂದ್ರ ಅವರು ಕಿಂಗ್ 567, ರಾಜ 567 ಇತ್ಯಾದಿಗಳ ಹೆಸರಿನಲ್ಲಿ ಹಲವಾರು ಆನ್‍ಲೈನ್ ಬೆಟ್ಟಿಂಗ್ ಆನ್‍ಲೈನ್ ಸೈಟ್‍ಗಳನ್ನು ನಡೆಸುತ್ತಿದ್ದರು. ಅವರ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ಮತ್ತು ಅವರ ಮಗ ಪೃಥ್ವಿ ಎನ್. ರಾಜ್ ಡೈಮಂಡ್ ಸಾಫ್ಟ್‌ ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಎಂಬ ಮೂರು ಸಂಸ್ಥೆಗಳನ್ನು ದುಬೈನಿಂದ ನಿರ್ವಹಿಸುತ್ತಿದ್ದರು. ಇವು ಕೆ. ಸಿ. ವೀರೇಂದ್ರ ಅವರ ಕಾಲ್ ಸೆಂಟರ್‍ಗಳು ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿವೆ ಎಂದು ಈಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭ್ರಷ್ಟಾಚಾರಿಗಳ ಮುಖವಾಡ ಬಯಲು: ‘ಲೂಟಿ ಹೊಡೆಯುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎನ್ನುವುದಕ್ಕೆ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಈಡಿ ದಾಳಿಯಲ್ಲಿ ಸಿಕ್ಕಿಬಿದ್ದಿರುವುದೇ ಸಾಕ್ಷಿ. ಆನ್‍ಲೈನ್ ಗೇಮಿಂಗ್, ಕ್ಯಾಸಿನೋ ಮೂಲಕ ನೂರಾರು ಕೋಟಿ ರೂ.ಜೇಬಿಗಿಳಿಸಿದ್ದ ‘ಕೈ’ ಶಾಸಕ ಇದೀಗ ಈಡಿ ಅತಿಥಿ. ಕೇಂದ್ರ ಬಿಜೆಪಿ ಸರಕಾರದ ಆನ್‍ಲೈನ್ ಬೆಟ್ಟಿಂಗ್ ಮತ್ತು ಜೂಜು ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಮತ್ತಷ್ಟು ಭ್ರಷ್ಟಾಚಾರಿಗಳ ಮುಖವಾಡ ಬಯಲಾಗಲಿದೆ ಕಾದು ನೋಡಿ’

-ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News