×
Ad

ಕೇಜ್ರಿವಾಲ್‍ಗೆ ಹುಚ್ಚು, ಬಿಜೆಪಿಯಲ್ಲಿ ವಯಸ್ಸಿನ ಬಗ್ಗೆ ನಿರ್ಧಾರ ಕೈಗೊಂಡಿಲ್ಲ: ಆರ್.ಅಶೋಕ್

Update: 2024-05-12 21:46 IST

ಬೆಂಗಳೂರು: ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಹಳ ದಿನ ಜೈಲಿನಲ್ಲಿ ಇದ್ದಿದ್ದರಿಂದ ಹುಚ್ಚರಂತೆ ವರ್ತಿಸುತ್ತಿದ್ದಾರೆ. ವಯಸ್ಸಿನ ಆಧಾರದ ಮೇಲೆ ಟಿಕೆಟ್ ನೀಡುವ ಕುರಿತು ಬಿಜೆಪಿಯಲ್ಲಿ ತೀರ್ಮಾನ ಕೈಗೊಂಡಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಅವರಿಗೆ ಗೊತ್ತಿಲ್ಲ. ಈಗಾಗಲೇ ಮೋದಿಯವರೇ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. 75 ವರ್ಷ ಕಳೆದವರಿಗೆ ಟಿಕೆಟ್ ನೀಡಲಾಗುತ್ತಿದೆ. ಟಿಕೆಟ್ ನೀಡುವುದಿಲ್ಲ ಎಂಬ ನಿರ್ಧಾರ ಪಕ್ಷದಲ್ಲಿ ಆಗಿಲ್ಲ. ಇದನ್ನು ಕಾಂಗ್ರೆಸ್‍ನವರೇ ಸೃಷ್ಟಿ ಮಾಡಿಕೊಂಡಿದ್ದಾರೆ. ಕೇಜ್ರಿವಾಲ್ ಮರಳಿ ಜೈಲಿಗೆ ಹೋಗಬೇಕಿದೆ. ಅವರು ಮತ್ತೆ ಬಿಡುಗಡೆಯಾಗುವುದಿಲ್ಲ ಎಂದು ನುಡಿದರು.

ಕೇಜ್ರಿವಾಲ್ ಅವರು ತಪ್ಪು ಮಾಡಿಲ್ಲವಾದರೆ ನ್ಯಾಯಾಲಯ ಕೂಡಲೇ ಜಾಮೀನು ನೀಡುತ್ತದೆ. ಲಾಲೂ ಪ್ರಸಾದ್ ಜೈಲಿಗೆ ಹೋಗಿದ್ದಾರೆ. ಜಾಮೀನು ಸಿಕ್ಕಿಲ್ಲ ಎಂದಾದರೆ ಅದಕ್ಕೆ ಸೂಕ್ತವಾದ ಪುರಾವೆ ಇದೆ ಎಂದರ್ಥ. ಅನೇಕ ವಿರೋಧ ಪಕ್ಷಗಳಿದ್ದರೂ ತಪ್ಪು ಮಾಡಿದವರು ಮಾತ್ರ ಜೈಲಿಗೆ ಹೋಗಿದ್ದಾರೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ದೃಷ್ಟಿಯಿಂದ ಪಕ್ಷದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಕೇಂದ್ರದ ನಾಯಕರು ನಿರ್ಧಾರ ಮಾಡಿದ್ದಾರೆ. ಇದರಲ್ಲಿ ರಾಜ್ಯದ ನಾಯಕರ ಪಾತ್ರವಿಲ್ಲ ಎಂದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡುತ್ತದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ನಾವು ಆಗ್ರಹಿಸುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News