×
Ad

ತ್ರಿಶೂರ್ ಕ್ಷೇತ್ರದಲ್ಲಿ ನನ್ನ ವಿಳಾಸದಲ್ಲಿ 9 ನಕಲಿ ಮತಗಳನ್ನು ಸೇರಿಸಲಾಗಿದೆ : ಗಂಭೀರ ಆರೋಪ ಮಾಡಿದ ಮಹಿಳೆ

ತ್ರಿಶೂರ್‌ ಬಿಜೆಪಿ ನಾಯಕ ಸುರೇಶ್‌ ಗೋಪಿ ಪ್ರತಿನಿಧಿಸುವ ಕ್ಷೇತ್ರ

Update: 2025-08-12 12:41 IST

ಪ್ರಸನ್ನ / ಸುರೇಶ್‌ ಗೋಪಿ (Photo credit: indiatoday,PTI)

ತ್ರಿಶೂರು: ʼಮತಗಳ ಕಳ್ಳತನʼದ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿರುವ ಮಧ್ಯೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಮಹಿಳೆಯೋರ್ವರು ನಮ್ಮ ವಿಳಾಸವನ್ನು ಬಳಸಿಕೊಂಡು ನಮಗೆ ತಿಳಿಯದೆ 9 ನಕಲಿ ಮತಗಳನ್ನು ನೋಂದಾಯಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಪೂಂಕುನ್ನಂನಲ್ಲಿರುವ ಕ್ಯಾಪಿಟಲ್ ವಿಲೇಜ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ಸಂಖ್ಯೆ 4C ಯಲ್ಲಿ ಈ ಅಕ್ರಮ ಬೆಳಕಿಗೆ ಬಂದಿದೆ.

ಫ್ಲಾಟ್ ಮಾಲಕಿ ಪ್ರಸನ್ನ ಅವರು, ನಮ್ಮ ಕುಟುಂಬದಲ್ಲಿ ನಾಲ್ವರು ವಯಸ್ಕರು ಮತ್ತು ಇಬ್ಬರು ಮಕ್ಕಳಿದ್ದಾರೆ. ತ್ರಿಶೂರ್‌ನಲ್ಲಿ ನಾನು ಮಾತ್ರ ಮತದಾನ ಮಾಡುವುದು. ಉಳಿದ ವಯಸ್ಕರು ನಮ್ಮ ಪೂರ್ವಜರ ಗ್ರಾಮವಾದ ಪೂಚಿನಿಪಡಂನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆದರೆ, ಪರಿಶೀಲನೆ ನಡೆಸಿದಾಗ ನಮ್ಮ ವಿಳಾಸದಲ್ಲಿ ಒಂಬತ್ತು ಹೆಚ್ಚುವರಿ ಮತದಾರರಿರುವುದು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ನಮಗೆ ಅವರು ಯಾರು ಎಂದು ತಿಳಿದಿಲ್ಲ. ನಾವು ನಾಲ್ಕು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಒಪ್ಪಿಗೆಯಿಲ್ಲದೆ ನಮ್ಮ ವಿಳಾಸಕ್ಕೆ ಹೆಸರುಗಳನ್ನು ಸೇರಿಸುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ಸಹಿ ಹಾಕಿದ ದೂರಿನಲ್ಲಿ ಪ್ರಸನ್ನ ಅವರು ಹೇಳಿದ್ದಾರೆ.

ವಾಟರ್ ಲಿಲಿ ಮತ್ತು ಕ್ಯಾಪಿಟಲ್ ವಿಲೇಜ್‌ನಂತಹ ಪೂಂಕುನ್ನಮ್‌ನ ಫ್ಲಾಟ್‌ಗಳಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ಸಂಭವಿಸಿವೆ. ಇತರ ಜಿಲ್ಲೆಗಳಿಂದ ಮತಗಳನ್ನು ವರ್ಗಾಯಿಸಲು ಖಾಲಿ ಇರುವ ಫ್ಲಾಟ್‌ಗಳನ್ನು ನಕಲಿ ವಿಳಾಸಗಳಾಗಿ ಬಳಸಲಾಗಿದೆ. ನಿಜವಾದ ಫ್ಲಾಟ್ ಮಾಲಕರಿಗೆ ಈ ಜನರ ಪರಿಚಯವೂ ಇಲ್ಲದಿರುವುದಿಂದ ಇದು ಗಂಭೀರವಾದುದು ಎಂದು ಸಿಪಿಎಂ ಆರೋಪಿಸಿದೆ.

ಚುನಾವಣಾ ಆಯೋಗ ಮತದಾರರ ನೋಂದಣಿ ಸಮಯದಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳಿಗೆ ಅವಕಾಶ ನೀಡಿದೆ ಎಂದು ಸಿಪಿಎಂ ನಾಯಕ, ತ್ರಿಶೂರ್ ಕ್ಷೇತ್ರದ ಅಭ್ಯರ್ಥಿಯಾಗಿದ್ದ ವಿ.ಎಸ್. ಸುನೀಲ್ ಕುಮಾರ್ ಆರೋಪಿಸಿದ್ದರು. ಒಂದೇ ಬೂತ್‌ನಲ್ಲಿ 280 ಅರ್ಜಿಗಳು ಒಟ್ಟಿಗೆ ಬಂದಿವೆ. ಇತರ ಕ್ಷೇತ್ರಗಳ ಜನರು ಮತ್ತು ವಲಸೆ ಕಾರ್ಮಿಕರ ಹೆಸರುಗಳನ್ನು ಸೇರಿಸಲಾಗಿದೆ ಎಂದು ಅವರು ಆರೋಪಿಸಿದ್ದರು.

2024ರಲ್ಲಿ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ್ ಗೋಪಿ ಗೆಲುವನ್ನು ಸಾಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News