×
Ad

ಬಿಪಿಎಲ್ ಕಾರ್ಡ್ ಪರಿಷ್ಕರಣೆ ಎರಡು ತಿಂಗಳೊಳಗೆ ಪೂರ್ಣ: ಕೆ.ಎಚ್.ಮುನಿಯಪ್ಪ

Update: 2025-03-10 22:08 IST

ಬೆಂಗಳೂರು : ಹೊಸ ಬಿಪಿಎಲ್ ಪಡಿತರ ಚೀಟಿಗಳನ್ನು ಮುಂದಿನ ಎರಡು ತಿಂಗಳೊಳಗೆ ಪರಿಷ್ಕರಣೆ ಮಾಡಿ ಪೂರ್ಣಗೊಳಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಸೋಮವಾರ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಡಿತರ ಚೀಟಿ ಕೋರಿ 2023ರಿಂದ ಈವರೆಗೂ 2,95,986 ಬಂದಿದ್ದ ಅರ್ಜಿಗಳ ಪೈಕಿ 2,04,760 ಅರ್ಜಿಗಳನ್ನು ವಿಲೇವಾರಿ ಮಾಡಿದರೆ ಇನ್ನುಳಿದ 91 ಸಾವಿರ ಅರ್ಜಿಗಳು ಪರಿಷ್ಕರಣೆ ಹಂತದಲ್ಲಿದ್ದು, ಈ ಪೈಕಿ 50 ರಿಂದ 60 ಸಾವಿರ ಅನರ್ಹ ಬಿಪಿಎಲ್ ಕಾರ್ಡುದಾರರಿದ್ದಾರೆ ಎಂದರು.

ಅನರ್ಹ ಬಿಪಿಎಲ್ ಪಡಿತರ ಚೀಟಿ ಪರಿಷ್ಕರಣೆಗೆ ಮತ್ತೆ ಚಿಂತನೆ ನಡೆಸಲಾಗಿದ್ದು, ಕೇಂದ್ರ ಸರಕಾರದ ಮಾನದಂಡ ಆಧರಿಸಿ ಪರಿಷ್ಕರಿಸಲು ಮುಂದಾದಾಗ ಪ್ರತಿಪಕ್ಷಗಳು ಸಹಕರಿಸಬೇಕು. ಈ ಹಿಂದೆ ಅನರ್ಹ ಬಿಪಿಎಲ್ ಕಾರ್ಡುದಾರರ ಚೀಟಿ ಪರಿಷ್ಕರಣೆ ಪ್ರಾರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಕೇಂದ್ರ ಸರಕಾರದ ಮಾನದಂಡ ಅನುಸರಿಸಿ ಪರಿಷ್ಕರಣೆ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಇದಕ್ಕೆ ಸರ್ವ ಪಕ್ಷದ ನಾಯಕರ ಸಹಕಾರ ಅಗತ್ಯವಿದೆ ಎಂದು ಮುನಿಯಪ್ಪ ಹೇಳಿದರು.

ದೇಶದಲ್ಲಿ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕವು ಆರ್ಥಿಕತೆಯಲ್ಲಿ ಮುಂದಿದೆ. ಆದ್ಯಾಗೂ ರಾಜ್ಯದಲ್ಲಿ ಶೇ.65ರಿಂದ 68ರಷ್ಟು ಬಡತನ ರೇಖೆಯೊಳಗಿನ ಜನರಿದ್ದಾರೆ. ಅನರ್ಹರನ್ನು ಬಿಪಿಎಲ್ ಪಡಿತರ ಪಟ್ಟಿಯಿಂದ ಕೈ ಬಿಡಲು ಗ್ರಾಮಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಕಂಪ್ಯೂಟರ್‌ನಲ್ಲಿ ಪರಿಶೀಲಿಸದೇ ಭೌತಿಕವಾಗಿ ತೆರಳಿದಾಗ ಮಾತ್ರ ವಾಸ್ತವಾಂಶ ತಿಳಿಯಲಿದೆ. ಅಧಿವೇಶನ ಮುಗಿದ ಬಳಿಕ ಈ ಕಾರ್ಯವನ್ನು ಚುರುಕುಗೊಳಿಸಲಾಗುವುದು ಎಂದು ಮುನಿಯಪ್ಪ ತಿಳಿಸಿದರು.

20 ಲಕ್ಷ ಅನರ್ಹರಿದ್ದಾರೆ: ಹಿಂದಿನ ಸರಕಾರದಲ್ಲಿ ಮೂರು ವರ್ಷಗಳಾದರೂ ಪಡಿತರ ಚೀಟಿ ಪರಿಷ್ಕರಣೆ ಕಾರ್ಯಕ್ಕೆ ಮುಂದಾಗಿರಲಿಲ್ಲ. ನಮ್ಮ ಸರಕಾರ ಬಂದ ಮೇಲೆ ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ. ರಾಜ್ಯದಲ್ಲಿರುವ 1.10 ಕೋಟಿ ಬಿಪಿಎಲ್ ಕಾರ್ಡುದಾರರ ಪೈಕಿ 20 ಲಕ್ಷ ಅನರ್ಹರಿದ್ದಾರೆ. ಪರಿಷ್ಕರಣಾ ಪಟ್ಟಿಯಿಂದ ಇವರನ್ನು ಕೈಬಿಟ್ಟರೆ ಅರ್ಹರಿಗೆ ಬಿಪಿಎಲ್ ಕಾರ್ಡು ನೀಡಲು ಸಾಧ್ಯವಾಗುತ್ತದೆ ಎಂದು ಕೆ.ಎಚ್.ಮುನಿಯಪ್ಪ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News