×
Ad

‘ಸರಕಾರಿ ಕಚೇರಿಗಳಲ್ಲಿ ಪ್ರಿ ಪೇಯ್ಡ್ ಮೀಟರ್ ಅಳವಡಿಕೆ’ | ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ : ಕೆ.ಜೆ.ಜಾರ್ಜ್

Update: 2025-06-18 21:29 IST

ಕೆ.ಜೆ.ಜಾರ್ಜ್

ಬೆಂಗಳೂರು : ಸರಕಾರಿ ಕಚೇರಿಗಳಲ್ಲಿ ಪ್ರೀ ಪೇಯ್ಡ್ ಮೀಟರ್ ಅಳವಡಿಸುವ ಕುರಿತು ಚಿಂತನೆ ನಡೆದಿದ್ದು, ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, ಪರಿಷ್ಕೃತ ವಿತರಣಾ ವಲಯ ಯೋಜನೆ(ಆರ್‍ಡಿಎಸ್‍ಎಸ್)ಯಡಿ ಇಂಧನ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರದಿಂದ ಶೇ.60ರಷ್ಟು ಸಹಾಯಧನ ಸಿಗುವುದರ ಜೊತೆಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಪ್ರತಿ ಮೀಟರ್‌ಗೆ 900 ರೂ.ಸಹಾಯಧನ ಸಿಗುತ್ತದೆ ಎಂದು ಹೇಳಿದರು.

ಸಹಾಯಧನವನ್ನೆ ಕೆಲವರು 900 ರೂ.ಗಳಿಗೆ ಸ್ಮಾರ್ಟ್ ಮೀಟರ್ ಸಿಗುತ್ತದೆ. ರಾಜ್ಯ ಸರಕಾರ ಹೆಚ್ಚು ಹಣ ಪಡೆಯುತ್ತಿದೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೈಕೋರ್ಟ್‍ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದುದರಿಂದ ಈ ಬಗ್ಗೆ ಹೆಚ್ಚು ಏನು ಪ್ರತಿಕ್ರಿಯಿಸುವುದಿಲ್ಲ ಎಂದು ಜಾರ್ಜ್ ತಿಳಿಸಿದರು.

ರೈತರಿಗೆ ಸೋಲಾರ್ ಪಂಪ್ ಸೆಟ್ ನೀಡುವ ಕುಸುಮ್- ಬಿ ಯೋಜನೆಯನ್ನು ರಾಜ್ಯ ಸರಕಾರ ಈಗಾಗಲೇ ಜಾರಿಗೆ ತಂದಿದೆ. ಇದರಲ್ಲಿ ಕೇಂದ್ರ ಸರಕಾರ ಶೇ.30, ರಾಜ್ಯ ಸರಕಾರ ಶೇ.50 ಹಾಗೂ ಫಲಾನುಭವಿಗಳು ಶೇ.20ರಷ್ಟು ಹಣವನ್ನು ಭರಿಸಬೇಕಾಗುತ್ತದೆ. ಅದೇ ರಿತಿ, ಪಿಎಂ ಕುಸುಮ್-ಸಿ ಯೋಜನೆ ರೈತರಿಗೆ ಅದರಲ್ಲೂ ಮುಖ್ಯವಾಗಿ ಬಯಲು ಸೀಮೆ ಭಾಗದ ರೈತರಿಗೆ ವರದಾನವಾಗಿದೆ ಎಂದು ಜಾರ್ಜ್ ತಿಳಿಸಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ 4 ಸಾವಿರ ಮೆ.ವ್ಯಾ.ವಿದ್ಯುತ್ ಉತ್ಪಾದನೆ ಮಾಡಿದ್ದೇವೆ. ಪ್ರಸ್ತುತ 35 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿದ್ದು, 2030ರ ವೇಳೆಗೆ ಇದನ್ನು 60 ಸಾವಿರ ಮೆ.ವ್ಯಾ.ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಿಎಂ ಕುರ್ಚಿ ಖಾಲಿಯಿಲ್ಲ, ಈ ಬಗ್ಗೆ ಚರ್ಚೆ ಅನಗತ್ಯ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಆದುದರಿಂದ, ಈ ಬಗ್ಗೆ ಈಗ ಚರ್ಚೆ ನಡೆಸುವುದು ಅನಗತ್ಯ. ಈಗಿರುವ ಮುಖ್ಯಮಂತ್ರಿಯನ್ನು 136 ಜನ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನೇಮಿಸಿದೆ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಯಾವ ಚರ್ಚೆಗಳು ನಡೆದಿಲ್ಲ. ನಮ್ಮ ಸರಕಾರವನ್ನು ಯಾವಾಗ ಬೀಳಿಸಬೇಕು ಎಂಬುದು ವಿಪಕ್ಷಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆಲ್ಲ ಪ್ರತಿಕ್ರಿಯಿಸುವ ಅಗತ್ಯವು ಇಲ್ಲ’

-ಕೆ.ಜೆ.ಜಾರ್ಜ್, ಇಂಧನ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News