ʼನಾಯಕತ್ವ ಬದಲಾವಣೆʼ ವಿಚಾರ | ಬಜೆಟ್ ಮಂಡನೆ ಆಗುವವರೆಗೆ ರಾಜ್ಯದಲ್ಲಿ ಏನೂ ಆಗುವುದಿಲ್ಲ : ಕೆ.ಎನ್.ರಾಜಣ್ಣ
"ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಗಲೂ ನಾನು ಆಕಾಂಕ್ಷಿ"
ಕೆ.ಎನ್.ರಾಜಣ್ಣ
ಬೆಂಗಳೂರು : ‘ಆಯವ್ಯಯ(ಬಜೆಟ್) ಮಂಡನೆ ಆಗುವವರೆಗೆ ರಾಜ್ಯದಲ್ಲಿ ಏನೂ ಆಗುವುದಿಲ್ಲ. ಅಲ್ಲಿಯ ವರೆಗೆ ಏನೂ ಮಾತನಾಡಲು ಹೋಗಬೇಡಿ. ಮಾರ್ಚ್ 31ರ ವರೆಗೆ ನಾಯಕತ್ವ ಬದಲಾವಣೆ ಸಂಬಂಧ ಯಾವುದೇ ಕಲ್ಪನೆಗಳು ಬೇಡ’ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಲೂ ಇರಬೇಕು, 2028ಕ್ಕೂ ಇರಬೇಕು ಎಂದು ಹೇಳಿದ್ದೇನೆ. ಅದರ ಬಗ್ಗೆ ಏಕೆ ನೀವು ಹೇಳುವುದಿಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವೈರಾಗ್ಯದ ಮಾತು ಹೇಳಿಲ್ವಾ?. ಕಾರ್ಯಕರ್ತನಾಗಿ ಇರುತ್ತೇನೆ ಎಂದು ಹೇಳಿಲ್ವಾ?. ಕಾರ್ಯಕರ್ತ ಶಾಶ್ವತ. ರಾಜಕಾರಣ ನಿಂತ ನೀರಲ್ಲ. ಚಲನಶೀಲತೆಯೇ ರಾಜಕಾರಣ. ಇವರಲ್ಲಿ ಯಾರ್ಯಾರು ಏನೇನಾಗುತ್ತಾರೆಯೋ ಗೊತ್ತಿಲ್ಲ. ಈಗಲೇ ಎಲ್ಲವನ್ನೂ ಊಹೆ ಮಾಡಲು ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯನವರ ಅಭಿಪ್ರಾಯವನ್ನು ಹೈಕಮಾಂಡ್ ಪರಿಗಣಿಸಬಹುದು ಎಂದು ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ಇದೆ. ಹೀಗಾಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದೇನೆ. ಅದಕ್ಕೆ ನಾವೆಲ್ಲರೂ ಹೋಗಬೇಕಿತ್ತು. ಕಾರಣಾಂತರಗಳಿಂದ ಹೋಗಲು ಆಗಿಲ್ಲ. ಜಾತ್ರೆ ಯಶಸ್ಸಿಗೆ ಎಲ್ಲರೂ ಸಹಕಾರ ಕೊಡಬೇಕು. ಅದಕ್ಕೆ ಭೇಟಿಯಾಗಿದ್ದೆವು ಎಂದು ರಾಜಣ್ಣ ಇದೇ ವೇಳೆ ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಗಲೂ ನಾನು ಆಕಾಂಕ್ಷಿ. ಸರಕಾರ, ಪಕ್ಷದಲ್ಲಿ ಏನೇ ಆಗಲಿ, ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಡಿಕೆಶಿ ನನಗೆ ಮೊದಲಿನಿಂದಲೂ ಸ್ನೇಹಿತರು. ನಾವೆಲ್ಲೋ ಹೋಗುತ್ತಿರುತ್ತೇನೆ, ಅದನ್ನೆಲ್ಲ ನಿಮಗೆ ಹೇಳಲು ಸಾಧ್ಯವೇ?. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಾನು ನಾಮಪತ್ರ ಹಾಕಬೇಕು ಎಂದು ಹೇಳಿದರು.