ಸಂಪುಟದಿಂದ ಕೆ.ಎನ್.ರಾಜಣ್ಣ ವಜಾಕ್ಕೆ ಆಕ್ರೋಶ : ತುಮಕೂರಿನಲ್ಲಿ ಬೆಂಬಲಿಗರಿಂದ ಪ್ರತಿಭಟನೆ
ತುಮಕೂರು : ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾಗೊಳಿಸಿದ ಕಾಂಗ್ರೆಸ್ ಹೈಕಮಾಂಡ್ ಕ್ರಮ ಖಂಡಿಸಿ, ಕೆ.ಎನ್.ರಾಜಣ್ಣನವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ರಾಜಣ್ಣ ಅಭಿಮಾನಿಗಳು, ವಾಲ್ಮೀಕಿ ಸಮುದಾಯದವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳು ಮುಖಂಡರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.
ಕೆ.ಎನ್.ಆರ್ ಅಭಿಮಾನಿ ಬಳಗ, ಕಾಂಗ್ರೆಸ್ ಮುಖಂಡರು, ಹಿಂದುಳಿದ ವರ್ಗಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ನಗರದ ಟೌನ್‍ಹಾಲ್ ವೃತ್ತ ಜಮಾಯಿಸಿ ಮಹಾನಗರ ಪಾಲಿಕೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಯಾವುದೇ ತಪ್ಪು ಮಾಡದ ಕೆ.ಎನ್.ರಾಜಣ್ಣನವರನ್ನು ಸಂಪುಟದಿಂದ ವಜಾ ಮಾಡಿ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಟೌನ್‍ಹಾಲ್ ವೃತ್ತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ರಾಜಣ್ಣ ಅಭಿಮಾನಿಗಳು,ಮಧುಗಿರಿ ಕ್ಷೇತ್ರದ ಕಾರ್ಯಕರ್ತರು ಕೆ.ಎನ್.ಆರ್.ಪರ ಘೋಷಣೆಗಳನ್ನು ಕೂಗುತ್ತಾ ಬಿ.ಹೆಚ್. ರಸ್ತೆ ಮುಖೇನ ಎಂ.ಜಿ. ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡ ಗಂಗಣ್ಣ ಮಾತನಾಡಿ, ಕೆ.ಎನ್. ರಾಜಣ್ಣ ಅವರು ಸಂಪುಟದಿಂದ ವಜಾ ಮಾಡಿರುವುದು ತುಮಕೂರು ಜಿಲ್ಲೆಯ ಅಹಿಂದ ವರ್ಗದವರಿಗೆ ತುಂಬಾ ನೋವಾಗಿದೆ. ಮತ್ತೆ ರಾಜಣ್ಣನವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಈ ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತದೆ. ಇದಕ್ಕೆ ಅವಕಾಶ ನೀಡದೇ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ರಾಜಣ್ಣನವರನ್ನು ವಜಾ ಮಾಡಿರುವುದನ್ನು ವಾಪಸ್ ಪಡೆದು ಮತ್ತೆ ಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗಳಿಸಲು ರಾಜಣ್ಣ ಕೊಡುಗೆ ಇದೆ. 30 ವರ್ಷಗಳಿಂದ ಕಾಂಗ್ರೆಸ್ ಗೆಲುವು ಸಾಧ್ಯವಾಗದ ಹಾಸನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆಯಲು ಅಲ್ಲಿನ ಉಸ್ತುವಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣನವರು ಪಕ್ಷ ನಿಷ್ಠೆ ಕಾರ್ಯತಂತ್ರ ಕಾರಣ ಎಂದರು.
ರಾಜಣ್ಣ ಅಭಿಮಾನಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರದ ಟೌನ್‍ಹಾಲ್ ಸರ್ಕಲ್, ಬಿ.ಎಚ್. ರಸ್ತೆ, ಎಂ.ಜಿ. ರಸ್ತೆಯ ಬದಿಗಳ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ತೆರವುಗೊಳಿಸಿದ ಪೊಲೀಸರು ಯಾವುದೇ ಅಹಿತಕರ ಘಟನೆಗಳಾಗದಂತೆ ಬಿಗಿ ಭದ್ರತೆ ಕೈಗೊಂಡಿದ್ದರು.