×
Ad

ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳಿಗೆ ಹಣದ ಕೊರತೆಯಿಲ್ಲ : ಕೆ.ಎನ್‌.ರಾಜಣ್ಣ

Update: 2025-06-28 19:12 IST

ಕೆ.ಎನ್‌.ರಾಜಣ್ಣ

ಬೆಂಗಳೂರು: ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳಿಗೆ ಹಣದ ಕೊರತೆಯಿಲ್ಲ. ಹಣ ಇಲ್ಲದೆ ಸಾವಿರಾರು ಕೋಟಿ ರೂ. ಅಭಿವೃದ್ದಿ ಕಾರ್ಯಕ್ರಮಗಳಿಗೆ ಅಡಿಪಾಯ ಹಾಕಲು ಸಾಧ್ಯವೇ ? ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಪ್ರಶ್ನಿಸಿದ್ದಾರೆ.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಸಿಎಂಗೆ ಬಿಟ್ಟ ವಿಚಾರ. ಬದಲಾವಣೆ ಹೈಕಮಾಂಡ್‌ ಅಂತಿಮ ತೀರ್ಮಾನಕ್ಕೆ ಬಿಟ್ಟ ವಿಚಾರ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ. ಕ್ರಾಂತಿ ಎನ್ನುವುದು ಕಾಂಗ್ರೆಸ್ ಪಕ್ಷದಲ್ಲಿಯೂ ಆಗಬಹುದು. ರಾಜ್ಯ ಸರಕಾರದಲ್ಲಿಯೂ ಆಗಬಹುದು. ಬಿಜೆಪಿಯ ನಿಯಮದ ಪ್ರಕಾರ 75 ವರ್ಷದ ನಿಯಮಕ್ಕೆ ಬೆಲೆ ಸಿಕ್ಕರೆ ಮೋದಿ ಹೋಗಿ ಬೇರೆಯವರು ಬರಬಹುದು. ಕ್ರಾಂತಿ ಕೇವಲ ಕರ್ನಾಟಕಕ್ಕೆ ಸಿಮೀತವಲ್ಲ. ಆಯಾಯ ದಿನ, ಬೆಳೆವಣಿಗೆ ಆಧರಿಸಿ ರಾಜಕೀಯ ಬೆಳವಣಿಗೆ ನಡೆಯಲಿದೆ. ಕ್ಷಣ ಕ್ಷಣಕ್ಕೂ ಬದಲಾಗುವ ಪ್ರಕ್ರಿಯೆ ಎಂದರೆ ಅದು ರಾಜಕಾರಣ ಎಂದು ಹೇಳಿದರು.

ಹೇಮಾವತಿ ಲಿಂಕ್ ಕೆನಾಲ್ ಬಗ್ಗೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ :

ಹೇಮಾವತಿ ಲಿಂಕ್ ಕೆನಾಲ್ ಯೋಜನೆಯ ಬಗ್ಗೆ ನಮ್ಮ ಮನಸ್ಥಿತಿ ಬದಲಾಗಿಲ್ಲ. ಮೊದಲು ಅದನ್ನು ವಿರೋಧಿಸುತ್ತಿದ್ದೆ. ಈಗಲೂ ವಿರೋಧಿಸುತ್ತೇನೆ. ಆದರೆ ಅದನ್ನು ಎಲ್ಲಿ ವ್ಯಕ್ತಪಡಿಸಬೇಕೋ ಅಲ್ಲಿ ಮಾತ್ರ ವ್ಯಕ್ತಪಡಿಸುತ್ತೇನೆ . ಡಿ.ಕೆ.ಶಿವಕುಮಾರ್ ಅವರ ಎಲ್ಲಿಯೂ ಹೇಮಾವತಿ ನೀರನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿಲ್ಲ ಎಂದರು.

ಮಧುಗಿರಿ ಜಿಲ್ಲೆಯಾಗಲಿದೆ :

ಮಧುಗಿರಿ ಜಿಲ್ಲೆಯಾಗುವುದರಲ್ಲಿ ಯಾವುದೇ ಅನುಮಾನ ಬೇಡ. ಜಿಲ್ಲೆಯಲ್ಲಿ 10 ತಾಲೂಕುಗಳು ಇರುವುದರಿಂದ ಅರಸೀಕೆರೆ ಸೇರಿಸಿಕೊಂಡು ತಿಪಟೂರು ಕೇಂದ್ರವಾಗಿ ಒಂದು ಜಿಲ್ಲೆ, ಮಧುಗಿರಿ ಕೇಂದ್ರವಾಗಿ ಮತ್ತೊಂದು ಜಿಲ್ಲೆ ಮಾಡಿದರೆ ಒಳ್ಳೆಯದು ಎಂದು ಹೇಳಿದರು.

ರಾಜಕೀಯ ನಿವೃತ್ತ 2028ರ ತೀರ್ಮಾನ. ನಾವು ಯಾವತ್ತಿದ್ದರೂ ಸಿದ್ದರಾಮಯ್ಯನವರ ಬಣ. ಬಸರಾಜರಾಯರೆಡ್ಡಿ ಅವರು ಹೇಳಿರುವಂತೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಯಾವ ಭಿನ್ನಾಭಿಪ್ರಾಯವೂ ಇಲ್ಲ :

ಗುಬ್ಬಿ ಶಾಸಕರಾದ ಶ್ರೀನಿವಾಸ ಮತ್ತು ನನ್ನ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಅವನ ಆಸ್ತಿ ನಾನು ಬರೆಯಿಸಿಕೊಂಡಿಲ್ಲ. ನನ್ನ ಆಸ್ತಿಯನ್ನು ಅವನು ಬರೆಯಿಸಿಕೊಂಡಿಲ್ಲ. ಗೌರವ ಅನ್ನುವುದು ಪರಸ್ವರ ಕೊಟ್ಟು ತೆಗೆದುಕೊಳ್ಳುವಂತಹದ್ದು. ಮಧುಗಿರಿ ತಾಲೂಕಿನಲ್ಲಿ ನಡೆದಿದೆ ಎನ್ನಲಾದ 14 ಎಕರೆ ಭೂಮಿ ಪರಭಾರೆ ಎಂಬ ವಿಚಾರವಾಗಿ ತನಿಖೆ ನಡೆಯುತ್ತಿದೆ. ದಾಖಲೆಗಳ ಪೋರ್ಜರಿ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಸತ್ಯ ಹೊರಬಂದರೆ ಎಫ್.ಐ.ಆರ್. ಹಾಕಲಾಗುವುದು ಎಂದು ತಿಳಿಸಿದರು.

ಆರೆಸ್ಸೆಸ್‌ ತತ್ವವನ್ನು ನಾವು ಒಪ್ಪುವುದಿಲ್ಲ :

ಸಂವಿಧಾನದಿಂದ ʼಜಾತ್ಯತೀತʼ ಮತ್ತು ʼಸಮಾಜವಾದʼ ಪದ ತೆಗೆದು ಹಾಕಬೇಕು ಎಂಬ ಆರೆಸ್ಸೆಸ್‌ ಹೇಳಿಕೆಗೆ ಬಿಜೆಪಿ ಬದ್ದವಾಗಿದ್ದರೆ ಬಹಿರಂಗಪಡಿಸಲಿ. ನಾವು ಜಾತ್ಯತೀತದ ವಿರೋಧಿಗಳು ಎಂದು ಹೇಳಲಿ. ಮೂಲ ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳಾಗಿವೆ. ಜನರ ನಿರೀಕ್ಷೆ ಮತ್ತು ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗಿದೆ. ಇಡೀ ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಆರೆಸ್ಸೆಸ್‌ ತತ್ವವನ್ನು ನಾವು ಒಪ್ಪುವುದಿಲ್ಲ ಎಂದು ನುಡಿದರು.

ಡಿ.ಕೆ.ಶಿವಕುಮಾರ್‌ ಮತ್ತು ನಮ್ಮ ನಡುವೆ ಯಾವುದೇ ಭಿನ್ನಮತ ಇಲ್ಲ. ನಾನು ಯಾರನ್ನು ನನ್ನ ಅಭಿನಂದನಾ ಸಮಾರಂಭಕ್ಕೆ ಕರೆದಿಲ್ಲ. ಅಭಿನಂದನಾ ಸಮಿತಿಯವರು ಕರೆದಿದ್ದಾರೆ. ಸ್ವತಃ ಸಿಎಂ ಅವರನ್ನು ನಾನು ಕರೆದಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News