×
Ad

‘ಸೆಪ್ಟಂಬರ್ ಕ್ರಾಂತಿ’ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ : ರಾಜಕೀಯ ವಲಯದಲ್ಲಿ ಪರ-ವಿರೋಧ ಚರ್ಚೆ

Update: 2025-06-27 18:03 IST

ಕೆ.ಎನ್.ರಾಜಣ್ಣ

ಬೆಂಗಳೂರು: ‘ಸೆಪ್ಟಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಸಂಭವಿಸಲಿದೆ’ ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸೇರಿದಂತೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜಕೀಯ ಬದಲಾವಣೆಯಾಗಲಿದೆ’ ಎಂಬ ಸಹಕಾರ ಸಚಿವ ರಾಜಣ್ಣ ನೀಡಿರುವ ಹೇಳಿಕೆಯನ್ನು ನಿರ್ಲಕ್ಷಿಸುವುದು ಸೂಕ್ತ. ರಾಜಕೀಯ ಬೆಳವಣಿಗೆಯಾಗಲಿದೆ ಎಂದು ಹೇಳಿದ್ದಾರೆ. ಆದರೆ, ಇದೇ ರೀತಿಯ ಬೆಳವಣಿಗೆ ಎಂದು ಅವರು ಹೇಳಿಲ್ಲ’ ಎಂದು ವಿವರಣೆ ನೀಡಿದ್ದಾರೆ.

ರಾಜಣ್ಣರ ಹೇಳಿಕೆಯನ್ನು ಮಾಧ್ಯಮಗಳು ತಮಗೆ ಬೇಕಾದಂತೆ ಊಹೆ ಮಾಡಿಕೊಂಡು ವರದಿ ಮಾಡಿವೆ. ಕಾಂಗ್ರೆಸ್‍ನಲ್ಲಿ ಆಂತರಿಕ ಬಿಕ್ಕಟ್ಟಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸುತ್ತಿದ್ದು, ಪಕ್ಷದಲ್ಲಿ ಸಮಸ್ಯೆ ಇದೆ ಎಂಬ ಕಾರಣಕ್ಕಾಗಿಯೇ ಅವರು ಬರುತ್ತಿದ್ದಾರೆ ಎಂಬುದು ಸರಿಯಲ್ಲ. ರಾಜಣ್ಣರ ಹೇಳಿಕೆಯನ್ನು ನಿರ್ಲಕ್ಷಿಸುವುದು ಸೂಕ್ತ. ಸಣ್ಣ-ಪುಟ್ಟ ಬದಲಾವಣೆ ಆಗಲಿದೆ ಎಂದು ಅವರು ಹೇಳಿರುವುದನ್ನು ಹೀಗೆಯೇ ವರದಿ ಮಾಡಬೇಕೆಂದು ಹೇಳಲು ನಾನು ಪತ್ರಕರ್ತನಲ್ಲ’ ಎಂದು ಸಿದ್ದರಾಮಯ್ಯ ವಿವರಣೆ ನೀಡಿದರು.

ಈ ಮಧ್ಯೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ‘ಸೆಪ್ಟೆಂಬರ್‍ನಲ್ಲಿ ಕ್ರಾಂತಿ ನಡೆಯುವ ಬಗ್ಗೆ ಸಚಿವ ಕೆ.ಎನ್.ರಾಜಣ್ಣಗೆ ಮಾಹಿತಿ ಇರಬೇಕು. ಇಲ್ಲದಿದ್ದರೆ ಹಾಗೆ ಹೇಳುತ್ತಿರಲಿಲ್ಲ. ಅವರಿಗೆ ಯಾವ ಮಾಹಿತಿ ಬಂದಿದೆ ಎಂಬುದು ನನಗೆ ಗೊತ್ತಿಲ್ಲ. ಇಲ್ಲದಿದ್ದರೆ ಜವಾಬ್ದಾರಿ ಸ್ಥಾನದಲ್ಲಿ ಇರುವ ಅವರು ಆ ರೀತಿಯಲ್ಲಿ ಹೇಳುತ್ತಿರಲಿಲ್ಲ. ಯಾವ ಕ್ರಾಂತಿ ಅನ್ನೋದನ್ನು ಅವರನ್ನೇ ಕೇಳಿ’ ಎಂದು ಹೇಳಿದರು.

ರಾಜಣ್ಣ ಹೇಳಿಕೆ ಪ್ರಕಾರ ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ ತಿಳಿದಂತೆ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಮುಂದೇನಾಗುತ್ತದೆ ಎಂದು ಹೇಗೆ ಹೇಳಲು ಸಾಧ್ಯ?. ಮುಂದೇನು ಎಂದು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಡಾ.ಪರಮೇಶ್ವರ್ ಇದೇ ಸಂದರ್ಭದಲ್ಲಿ ವಿವರಣೆ ನೀಡಿದರು.

ಅವರನ್ನೇ ಕೇಳಿ: ‘ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆಯೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಕ್ರಾಂತಿ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರೇ ಹೇಳಿದ್ದಾರೆ. ಅದನ್ನಷ್ಟೇ ಮಾಧ್ಯಮಗಳಲ್ಲಿ ನಾನು ಗಮನಿಸಿದ್ದೇನೆ. ಅದು ಏನು ಎಂಬುದನ್ನು ರಾಜಣ್ಣ ಅಥವಾ ಸಿಎಂ ಅವರೇ ಹೇಳಬೇಕು. ಅವರ ಪಕ್ಷದ ಬೆಳವಣಿಗೆ ಬಗ್ಗೆ ನನಗೆ ಹೇಗೆ ಗೊತ್ತಾಗಲಿದೆ? ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News