×
Ad

ಕೋಗಿಲು ಒತ್ತುವರಿ ತೆರವು | ಮಾನವೀಯ ನೆಲೆಯಲ್ಲಿ ಅರ್ಹರಿಗೆ ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ : ಸಿಎಂ ಸಿದ್ದರಾಮಯ್ಯ

‘ಅನಧಿಕೃತ ನಿರ್ಮಾಣಕ್ಕೆ ಅವಕಾಶ ನೀಡಿದರೆ ಅಧಿಕಾರಿಗಳೇ ಹೊಣೆ’

Update: 2025-12-29 20:34 IST

ಸಿಎಂ ಸಿದ್ದರಾಮಯ್ಯ 

ಬೆಂಗಳೂರು : ಕೋಗಿಲು ಬಳಿ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಸುಮಾರು 167 ಶೆಡ್‍ಗಳನ್ನು ನೋಟಿಸ್ ನೀಡಿದ ಬಳಿಕವೇ ತೆರವುಗೊಳಿಸಲಾಗಿದೆ. ಮಾನವೀಯ ನೆಲೆಯಲ್ಲಿ ಈ ಒಂದು ಪ್ರಕರಣಕ್ಕೆ ಸೀಮಿತವಾಗಿ ಅರ್ಹರಿಗೆ ಸರಕಾರದ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸೋಮವಾರ ಮುಖ್ಯಮಂತ್ರಿಯ ಸರಕಾರಿ ನಿವಾಸ ಕಾವೇರಿಯಲ್ಲಿ ಉಪ ಮುಖ್ಯಮಂತ್ರಿ, ಸಚಿವರು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಆಯುಕ್ತರು, ವಸತಿ ಇಲಾಖೆಯ ಅಧಿಕಾರಿಗಳು ಮೂರು ದಿನಗಳ ಕಾಲ ಅಲ್ಲಿ ವಾಸಿಸುತ್ತಿದ್ದವರ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಎಲ್ಲವನ್ನೂ ಪರಿಶೀಲಿಸಿ ಮನೆ ಹಾಗೂ ನಿವೇಶನ ಇಲ್ಲದಂತಹ ಅರ್ಹ ಕುಟುಂಬಗಳ ಪಟ್ಟಿ ನೀಡಿದ ಬಳಿಕ, ನಾವು ಮನೆಗಳನ್ನು ನೀಡುವ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

2020-21ರಿಂದ ಅಲ್ಲಿ ಅಕ್ರಮವಾಗಿ ಶೆಡ್‍ಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು. ಈ ಬಗ್ಗೆ ಗಮನ ಹರಿಸದ ಆ ಭಾಗದ ಕಂದಾಯ ಹಾಗೂ ಪಾಲಿಕೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ತಹಶೀಲ್ದಾರ್, ಶಿರಸ್ತೇದಾರ, ಗ್ರಾಮ ಆಡಳಿತಾಧಿಕಾರಿಯ ಗಮನಕ್ಕೆ ಬಾರದೆ ಇಂತಹ ಒತ್ತುವರಿ ಆಗಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.

ಭವಿಷ್ಯದಲ್ಲಿ ಈ ರೀತಿ ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಅನಧಿಕೃತ ನಿರ್ಮಾಣ ಆಗದಂತೆ ತಡೆಯಬೇಕು ಎಂಬುದು ನಮ್ಮ ಉದ್ದೇಶ. ಯಾರಾದರೂ ಇಂತಹ ಬೆಳವಣಿಗೆಗಳಿಗೆ ಅವಕಾಶ ಮಾಡಿಕೊಟ್ಟರೆ ಸಂಬಂಧಪಟ್ಟ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ವಿಚಾರದ ಬಗ್ಗೆ ದಿಲ್ಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ನನ್ನ ಜೊತೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಯೂ ಚರ್ಚೆ ಮಾಡಿದ್ದಾರೆ. ಅದೇ ಜಾಗದಲ್ಲಿ ಅವರಿಗೆ ಮನೆಗಳನ್ನು ಕೊಡಲು ಆಗುವುದಿಲ್ಲ. ಅದು ಸರಕಾರಿ ಜಾಗವಾಗಿದ್ದು, ಅಕ್ರಮವಾಗಿ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಅವರಿಗೆ ಮಾಹಿತಿ ನೀಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಊಟ, ವಸತಿ ಸೌಕರ್ಯ ಕಲ್ಪಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‍ರಾವ್ ಮತ್ತು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ತಿಳಿಸಿದ್ದೆ. ಮೂರು ಕಡೆ ಅವರಿಗಾಗಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಲ್ಲಿರುವವರು ಯಾರು ಹೋಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಕಮ್ಯುನಿಸ್ಟ್ ಪಕ್ಷದವರಿಂದ ಅನಗತ್ಯ ರಾಜಕೀಯ:

ಕಮ್ಯುನಿಸ್ಟ್ ಪಕ್ಷದವರು ಅನಗತ್ಯವಾಗಿ ಇದರಲ್ಲಿ ರಾಜಕೀಯ ಬೆರೆಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ರಾಜಕೀಯ ವಿಷಯವನ್ನಾಗಿ ಮಾಡಿದರು. ಮುಂದಿನ ಮಾರ್ಚ್-ಎಪ್ರಿಲ್ ವೇಳೆಗೆ ಕೇರಳದಲ್ಲಿ ಚುನಾವಣೆ ಬರುತ್ತಿದೆ. ಆದಕ್ಕಾಗಿ, ಒಬ್ಬ ಶಾಸಕ, ರಾಜ್ಯಸಭಾ ಸದಸ್ಯನನ್ನು ಇಲ್ಲಿಗೆ ಕಳುಹಿಸಿದ್ದರು ಎಂದು ಸಿದ್ದರಾಮಯ್ಯ ಟೀಕಿಸಿದರು.

ಯಾರಿಗೆ ನಿವೇಶನ, ಮನೆ ಇಲ್ಲವೋ ಅಂತಹ ಬಡವರಿಗಾಗಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಈ ಪ್ರಕರಣದಲ್ಲಿಯೂ ಯಾರಿಗೆ ನಿವೇಶನ, ಮನೆಗಳು ಇಲ್ಲವೋ ಅಂತಹ ಅರ್ಹರನ್ನು ಗುರುತಿಸಿ ಮನೆಗಳನ್ನು ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಕೆಲವರು ದುಡ್ಡು ಪಡೆದು ಶೆಡ್ ಹಾಕಿಕೊಳ್ಳಲು ಅವಕಾಶ ಕೊಟ್ಟಿದ್ದಾರೆ: ಡಿಕೆಶಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಪಾಲಿಕೆಗೆ ಘನತ್ಯಾಜ್ಯ ವಿಲೇವಾರಿಗೆ ಕೊಟ್ಟ ಜಾಗದಲ್ಲಿ ಹಂತ ಹಂತವಾಗಿ ಅನಧಿಕೃತವಾಗಿ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೆಲವರು ದುಡ್ಡು ಪಡೆದು ಶೆಡ್ ಹಾಕಿಕೊಳ್ಳಲು ಅವಕಾಶ ಕೊಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅಂತಹವರ ವಿರುದ್ಧ ಅಧಿಕಾರಿಗಳು ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಯಾರಿಗೆ ನಿಜವಾಗಿಯೂ ವಾಸಕ್ಕೆ ಮನೆ ಇಲ್ಲವೋ ಅವರಿಗೆ ಮುಖ್ಯಮಂತ್ರಿ 1ಲಕ್ಷ ವಸತಿ ಯೋಜನೆಯಲ್ಲಿ ಮನೆ ನೀಡಲಾಗುವುದು. ಇದಕ್ಕೆ ಅವರು 1.5 ಲಕ್ಷ ರೂ.ಗಳಿಂದ 2ಲಕ್ಷ ರೂ.ಹಣವನ್ನು ಪಾವತಿಸಬೇಕು. ಇದಕ್ಕೆ ಸಾಲಸೌಲಭ್ಯ ಕಲ್ಪಿಸುವ ಜವಾಬ್ದಾರಿಯನ್ನು ವಸತಿ ಝಮೀರ್ ಅಹ್ಮದ್ ಅವರಿಗೆ ವಹಿಸಲಾಗಿದೆ. ನಾವು ಮನೆ ನೀಡುವ ಮುನ್ನ ಅವರು ಯಾರೂ, ಎಲ್ಲಿಂದ ಬಂದಿದ್ದಾರೆಂಬುದರ ಕುರಿತು ದಾಖಲೆಗಳನ್ನು ಪರಿಶೀಲಿಸುತ್ತೇವೆ. ಅಲ್ಲಿಯ ವರೆಗೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.

ಕೆಲವರು ಬೇರೆ ಕಡೆ ಮನೆ ಇದ್ದರೂ ಇಲ್ಲಿ ಬಂದು ನೆಲೆಸಿದ್ದರು ಎಂಬ ಮಾಹಿತಿ ಇದೆ. ಬೇರೆ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿರುವವರು ಇದ್ದಾರೆ. ಬಾಡಿಗೆಯ ಕರಾರು ಪತ್ರಗಳನ್ನು ಮಾಡಿಕೊಂಡಿದ್ದಾರೆ. ಆದುದರಿಂದ, ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸ್ಥಳೀಯ ಶಾಸಕರಾಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಆ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸದ್ಯ ಅವರು ವಿದೇಶದಲ್ಲಿದ್ದು ವಾಪಸ್ ಬಂದ ಬಳಿಕ ಅರ್ಹರಿಗೆ ಮನೆಗಳನ್ನು ಮಂಜೂರು ಮಾಡಲಾಗುವುದು. ಅನಧಿಕೃತ ನಿರ್ಮಾಣಕ್ಕೆ ನಾವು ಯಾವುದೆ ಕಾರಣಕ್ಕೂ ಪ್ರೋತ್ಸಾಹ ನೀಡುವುದಿಲ್ಲ. ಬೆಂಗಳೂರಿನಲ್ಲಿ ಇಂತಹ ಅನಧಿಕೃತ ಸ್ಲಂಗಳ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಅದು ಕಸ ತುಂಬುವ ಜಾಗ, ಯಾರು ಅಲ್ಲಿ ವಾಸ ಮಾಡಲು ಆಗುವುದಿಲ್ಲ. 15 ಎಕರೆ ಜಾಗವನ್ನು ಕಂದಾಯ ಇಲಾಖೆಯು ಘನ್ಯತ್ಯಾಜ್ಯ ವಿಲೇವಾರಿಗಾಗಿ ಪಾಲಿಕೆಗೆ ನೀಡಿದೆ ಎಂದು ಅವರು ಹೇಳಿದರು.

ಸುತ್ತಮುತ್ತಲಿನ ಪರಿಸರ ಕಾಪಾಡಲು ವ್ಯವಸ್ಥೆ ಮಾಡಿದ್ದೇವೆ. ಬೇರೆಯವರಿಗೆ ರಾಜಕಾರಣ ಮಾಡಲು ಅವಕಾಶ ನೀಡಲ್ಲ. ವರಿಷ್ಠರು ನಮಗೆ ಕೆಲವು ಸಲಹೆ ನೀಡಿದ್ದಾರೆ. ಅದರಂತೆ, ಗಮನ ಹರಿಸಿ ಯಾರಿಗೆ ಮನೆಗಳು ಇಲ್ಲ, ಅಂತಹವರನ್ನು ಗುರುತಿಸಿ ಮನೆಗಳನ್ನು ನೀಡುವ ಕೆಲಸ ಮಾಡಲಾಗುತ್ತಿದೆ. ಸರಕಾರದಲ್ಲಿ ಮನೆಗಳಿಗಾಗಿ ಸಹಾಯಧನದ ವ್ಯವಸ್ಥೆಯೂ ಇದೆ. ಸಾಲ ಕೊಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಸಭೆಯಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ಪ್ರಸಾದ್ ಅಬ್ಬಯ್ಯ, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಡಾ.ಮಹೇಶ್ವರರಾವ್, ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್, ಘನ ತ್ಯಾಜ್ಯ ನಿರ್ವಹಣೆ ನಿಯಮಿತ ಸಿಇಓ ಕರೀಗೌಡ ಮತ್ತಿತರರು ಉಪಸ್ಥಿತರಿದ್ದರು.

‘ಕೆ.ಸಿ.ವೇಣುಗೋಪಾಲ್ ನಮ್ಮ ಆಡಳಿತದಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ, ನಮಗೆ ಸಲಹೆ ನೀಡಲು ಅವರಿಗೆ ಎಲ್ಲ ಅಧಿಕಾರ ಇದೆ. ನಮ್ಮದು ರಾಷ್ಟೀಯ ಪಕ್ಷ, ರಾಷ್ಟ್ರೀಯ ನಾಯಕರಾಗಿ ಅವರು ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆಯೆ ಹೊರತು, ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ’

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News