×
Ad

ಕೋಗಿಲು ಘಟನೆ | ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಪುನರ್ವಸತಿಗೆ ಸ್ಥಳ ಗುರುತಿಸಲಾಗಿದೆ; ಹೈಕೋರ್ಟ್‌ಗೆ ಸರಕಾರದ ಮಾಹಿತಿ

Update: 2026-01-07 20:04 IST

ಬೆಂಗಳೂರು: ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿ ಮನೆಗಳ‌ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಲು ಮೂರು ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಮನೆಗಳ ತೆರವು ಕಾರ್ಯಾಚರಣೆಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹಾನಾ ಹಾಗೂ ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಒತ್ತುವರಿ ತೆರವಿನ ವೇಳೆ ಹಾನಿಗೊಳಗಾಗಿರುವ ಫಕೀರ್‌ ಮತ್ತು ವಾಸಿಂ ಕಾಲನಿಯ ನಿವಾಸಿಗಳಿಗೆ ತಾತ್ಕಾಲಿಕವಾಗಿ ಪುನರ್ವಸತಿ ಕಲ್ಪಿಸಲು 3 ಸ್ಥಳಗಳನ್ನು ಗುರುತಿಸಲಾಗಿದ್ದು, ಅವರಿಗೆ ಆಹಾರ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಮುಂದುವರಿದು, ಒತ್ತುವರಿಯಾಗಿರುವ ಪ್ರದೇಶವು ಸರ್ಕಾರದ ಜಾಗವಾಗಿದ್ದು, ಕಟ್ಟಡಗಳ ಧ್ವಂಸ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ ಮಾರ್ಗಸೂಚಿಯು ಇದಕ್ಕೆ ಅನ್ವಯಿಸುವುದಿಲ್ಲ. ಈ ನಿರ್ದಿಷ್ಟ ಜಾಗವು ಕ್ವಾರಿ ಪ್ರದೇಶವಾಗಿದ್ದು, ಆನಂತರ ಇದನ್ನು ನೀರಿನ ಟ್ಯಾಂಕ್‌ ಪ್ರದೇಶವನ್ನಾಗಿ ಬಳಕೆ ಮಾಡಲಾಗಿತ್ತು. ಈ ನಡುವೆ ಸಂತ್ರಸ್ತರು ಮನೆ ನಿರ್ಮಿಸಿದ್ದರಿಂದ ಆ ನೀರು ಕಲುಷಿತಗೊಂಡಿತ್ತು. ಇದು ಕೊಳಚೆ ಪ್ರದೇಶವಲ್ಲ ಎಂದರು.

ಆಗ ನ್ಯಾಯಪೀಠ, ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಅನ್ವಯವಾಗದಿರಬಹುದು. ಆದರೆ, ಬೇರೆ ತೀರ್ಪುಗಳಿವೆ. ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಾಗ ಕೆಲವು ಪ್ರಕ್ರಿಯೆ ಪಾಲಿಸಬೇಕಾಗುತ್ತದೆ. 28 ವರ್ಷಗಳಿಂದ ಅಲ್ಲಿ ನೆಲೆಸಿರುವುದಾಗಿ ಅರ್ಜಿದಾರರು ಹೇಳುತ್ತಿದ್ದಾರೆ ಎಂದು ಹೇಳಿತು‌. ಅದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್, ಈ ಹೇಳಿಕೆ ವಾಸ್ತವಿಕ ಅಂಶಗಳಿಗೆ ವಿರುದ್ಧವಾಗಿದೆ. ಯಾವಾಗ ಪ್ರತಿಯೊಂದು ಮನೆ ನಿರ್ಮಾಣವಾಗಿವೆ ಎಂದು ತೋರಿಸಲು ನಮ್ಮ ಬಳಿ ಉಪಗ್ರಹ ಚಿತ್ರಗಳಿವೆ ಎಂದರು.

ಈ ಹಂತದಲ್ಲಿ ಅರ್ಜಿದಾರರ ಪರ ವಕೀಲರು, ಈಗ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವಾಗಿರುವ ಹಿಂದಿನ ಬಿಬಿಎಂಪಿ 2014ರಲ್ಲಿ ಸ್ಥಳ ಹಂಚಿಕೆ ಮಾಡಿದೆ. ಕಾರ್ಯಾಚರಣೆಯಲ್ಲಿ ನಿರ್ಗತಿಕರಾಗಿರುವ 300 ಕುಟುಂಬಗಳ 3 ಸಾವಿರ ಮಂದಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಅದಕ್ಕೆ ನ್ಯಾಯಪೀಠ, ಒಕ್ಕಲೆಬ್ಬಿಸಿರುವುದಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಕಲ್ಪಿಸಲು 3 ಕಡೆ ಸ್ಥಳ ಗುರುತಿಸಿದ್ದು, ಅಲ್ಲಿ ನೆಲೆಸಲು ಅರ್ಜಿದಾರರಿಗೆ ಅವಕಾಶವಿದೆ ಎಂದು ಸರಕಾರ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು. ಆದ್ದರಿಂದ, ಮಧ್ಯಂತರ ಕೋರಿಕೆಯ ಪ್ರಶ್ನೆ ಉದ್ಭವಿಸದು ಎಂದು ಹೇಳಿತು‌.

ಅರ್ಜಿದಾರರ ಪರ ವಕೀಲರು, ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಯಾವುದೇ ರೀತಿಯ ನೋಟಿಸ್‌ ನೀಡಲಾಗಿಲ್ಲ. ಸಹಜನ್ಯಾಯ ತತ್ವ ಪಾಲಿಸಲಾಗಿಲ್ಲ ಎಂದರು. ಈ ಮಧ್ಯೆ ಯಾವ ರೀತಿಯ ಮಧ್ಯಂತರ ಪರಿಹಾರ ಬೇಕು ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ಆಹಾರ ಮತ್ತು ಹೊದಿಕೆ ಒದಗಿಸಬೇಕು ಎಂದರು.

ಅಂತಿಮವಾಗಿ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರಕಾರ, ಬಿಬಿಎಂಪಿ ಮತ್ತಿತರರಿಗೆ ನೋಟಿಸ್‌ ಜಾರಿಗೊಳಿಸಿ, ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಪುನರ್ವಸತಿಗೆ ಪರ್ಯಾಯ ಜಾಗ ಒದಗಿಸಲಾಗುವುದು ಎಂಬ ಅಡ್ವೊಕೇಟ್‌ ಜನರಲ್‌ ಹೇಳಿಕೆ ದಾಖಲಿಸಿಕೊಂಡಿತು. ಜತೆಗೆ, ವಿಸ್ತೃತವಾದ ಆಕ್ಷೇಪಣೆ ಹಾಗೂ ಸಮಗ್ರ ಪ್ರಮಾಣಪತ್ರ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 22ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News