×
Ad

ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವು ಪ್ರಕರಣ | ನಿವಾಸಿಗಳ ಸಮೀಕ್ಷೆ ಪೂರ್ಣ, ವರದಿ ಬಂದ ನಂತರ ಅರ್ಹರಿಗೆ ಪರ್ಯಾಯ ವ್ಯವಸ್ಥೆ: ಕೃಷ್ಣ ಬೈರೇಗೌಡ

Update: 2026-01-05 19:20 IST

ಬೆಂಗಳೂರು : ಕೋಗಿಲು ಬಡಾವಣೆಯಲ್ಲಿ ನೆಲೆಸಿರುವ ನಿವಾಸಿಗಳ ಸಮೀಕ್ಷೆ ಪೂರ್ಣಗೊಂಡಿದ್ದು, ವರದಿ ಬಂದ ನಂತರ ಅರ್ಹರಿಗೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ನೋಡಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದು ಏನಿದೆ? ಕೆಲವರು ನನ್ನ ವಿರುದ್ಧ ಈ ಪ್ರಕರಣವನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಸಾಮಾನ್ಯವಾಗಿದ್ದು, ಇದಕ್ಕೆಲ್ಲ ಜಗ್ಗದೇ ಒಳ್ಳೆಯ ಕೆಲಸ ಮುಂದುವರೆಸುತ್ತೇನೆ ಎಂದರು.

2021ರಲ್ಲಿ ಕೋಗಿಲು ಬಡಾವಣೆಯಲ್ಲಿ ಅತಿಹೆಚ್ಚು ಒತ್ತುವರಿಯಾಗಿದೆ. ಅಂದು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಹೀಗಾಗಿ ಒತ್ತುವರಿದಾರರಿಗೆ ಬಿಜೆಪಿ ನಾಯಕರೇ ಶ್ರೀರಕ್ಷೆ ಎನ್ನಬಹುದೇ? ಬಿಜೆಪಿ ಅಧಿಕಾರದ ಅವಧಿಯಲ್ಲಿಯೇ ಕೋಗಿಲು ಬಡಾವಣೆ ಭಾಗದಲ್ಲಿ ಅತಿಹೆಚ್ಚು ಒತ್ತುವರಿಯಾಗಿದೆ. ಹಾಗಾದರೆ ಅದನ್ನು ಬಿಜೆಪಿ ಪ್ರಾಯೋಜಿತ ಒತ್ತುವರಿ ಎನ್ನಬಹುದೇ ಎಂದು ಅವರು ಪ್ರಶ್ನಿಸಿದರು.

ನಾವು ಒತ್ತುವರಿಗೆ ಬೆಂಬಲ ನೀಡಿದ್ದರೆ ತೆರವಿಗೆ ಮುಂದಾಗುತ್ತಿರಲಿಲ್ಲ. ಬಿಜೆಪಿ ನಾಯಕರ ಮಾತಿಗೆ ತಲೆ ಬುಡ ಎಂಬುದು ಇರುವುದಿಲ್ಲ. ಸುಳ್ಳನ್ನು ಸತ್ಯ ಮಾಡುವುದನ್ನಷ್ಟೇ ಅವರು ಕರಗತ ಮಾಡಿಕೊಂಡಿದ್ದಾರೆ ಎಂದು ಕೃಷ್ಣ ಬೈರೇಗೌಡ ಆರೋಪಿಸಿದರು.

ಕೋಗಿಲು ಬಡಾವಣೆಯಲ್ಲಿ ಎರಡು ತಿಂಗಳ ಹಿಂದೆಯೇ 10 ಅನಧಿಕೃತ ಮನೆಗಳನ್ನು ತೆರವು ಮಾಡಿಸಿ ಇತರರೂ ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಆದರೂ ತೆರವಿಗೆ ಮಾಡದ ಕಾರಣ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಒಂದು ವರ್ಷದಿಂದ ನನ್ನ ಸೂಚನೆಯ ಮೇರೆಗೆ ಎಲ್ಲ ಜಿಲ್ಲಾಧಿಕಾರಿಗಳು ವಾರಕ್ಕೆ ಒಂದು ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರರಿಗೆ ಗುರಿ ನಿಗದಿ ಮಾಡಿದ್ದಾರೆ. ಅದರಂತೆ ಕೋಗಿಲು ಬಡಾವಣೆಯಲ್ಲೂ ಒತ್ತುವರಿ ತೆರವು ಮಾಡಲಾಗಿದೆ. ಇದು ಸರಕಾರದ ಸಾಮಾನ್ಯ ಕೆಲಸವಾಗಿದ್ದು, ಎಲ್ಲವನ್ನೂ ಕಾನೂನುಬದ್ಧವಾಗಿಯೇ ನಿರ್ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಇನ್ಫೋಸಿಸ್‍ಗೆ ನೀಡಿದ ಭೂಮಿ ಮಾರಾಟವನ್ನು ತನಿಖೆ ನಡೆಸಲು ಸೂಚನೆ

ಇನ್ಫೋಸಿಸ್‍ಗೆ ನೀಡಿದ ಭೂಮಿ ಮಾರಾಟ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಬೆಂಗಳೂರು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ. ತನಿಖೆ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.

- ಕೃಷ್ಣ ಬೈರೇಗೌಡ, ಕಂದಾಯ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News