×
Ad

‘ಕೊಂಕಣ ರೈಲ್ವೆ’ ವಿಲೀನಕ್ಕೆ ಕೇಂದ್ರಕ್ಕೆ ಪತ್ರ ಬರೆಯಲು ಸಿಎಂಗೆ ಮನವಿ

Update: 2025-03-17 16:48 IST

ಬೆಂಗಳೂರು : ‘ಗೋವಾ ಮಾದರಿಯಲ್ಲಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಿ, ಕೇಂದ್ರ ಬಜೆಟ್‍ನಲ್ಲಿ ಅನುದಾನ ಪಡೆದು ರೈಲ್ವೆ ಮಾರ್ಗದ ಅಭಿವೃದ್ಧಿಗೆ ಕೇಂದ್ರ ರೈಲ್ವೆ ಸಚಿವರಿಗೆ ರಾಜ್ಯ ಸರಕಾರವು ಪತ್ರ ಬರೆಯಬೇಕು’ ಎಂದು ಕೋರಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವ ನಿಯೋಗವೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದೆ.

ಸೋಮವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ನಿಯೋಗದಲ್ಲಿದ್ದ ಶಾಸಕರಾದ ವಿ. ಸುನಿಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ ಸೇರಿದಂತೆ ಇನ್ನಿತರರು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ದೇಶದ ಎಲ್ಲ ರೈಲು ಹಳಿಗಳೂ ಕೇಂದ್ರ ಬಜೆಟ್ ಅನುದಾನ ಪಡೆದರೆ, ಮಂಗಳೂರು, ಮುಂಬಯಿ ಕೊಂಕಣ ಮಾರ್ಗ ಮಾತ್ರ ಪ್ರತ್ಯೇಕ ನಿಗಮದ ಕೈಯಲ್ಲಿದ್ದು, ಈ ನಿಗಮಕ್ಕೆ ಕರ್ನಾಟಕ ಸರಕಾರ ಶೇ.15ರಷ್ಟು ಅಂದರೆ ಸುಮಾರು 200 ಕೋಟಿ ರೂ.ಹೂಡಿಕೆಯನ್ನು 30 ವರ್ಷಗಳ ಹಿಂದೆ ಮಾಡಿರುತ್ತದೆ.

ಈ ಹೂಡಿಕೆಗೆ ರಾಜ್ಯದ ಕರಾವಳಿಯನ್ನು ಮುಂಬಯಿಗೆ ಜೋಡಿಸಿ 30ವರ್ಷಗಳ ಕಾಲ ರೈಲು ಓಡಾಡಿದ ಲಾಭ ರಾಜ್ಯಕ್ಕೆ ಈಗಾಗಲೇ ಸಿಕ್ಕಿರುತ್ತದೆ. ಮೂಲ ಒಪ್ಪಂದದಂತೆ, ಆರಂಭವಾದ 10 ವರ್ಷಗಳಲ್ಲಿ ಈ ನಿಗಮವು ಭಾರತೀಯ ರೈಲ್ವೆ ಜತೆ ವಿಲೀನವಾಗಿ ಅದರ ಖರ್ಚು ಹಳಿ ಡಬ್ಲಿಂಗ್ ಎಲ್ಲವನ್ನೂ ನೋಡಿಕೊಳ್ಳಬೇಕಾಗಿತ್ತು.ಆದರೆ, ಇಂದಿಗೂ ಈ ವಿಲೀನ ಮಾಡದೇ ಕೊಂಕಣ ರೈಲ್ವೆ ನಿಗಮವಾಗಿ ರಾಜ್ಯದ ಪಾಲುದಾರಿಕೆಯಲ್ಲಿ ಬಹುಕಾಲ ನಷ್ಟದಲ್ಲೇ ಮುಂದುವರಿದ ಪರಿಣಾಮ, ಇಂದು ರೈಲು ದಟ್ಟಣೆಯ ಹೊರತಾಗಿಯೂ ನಿಲ್ದಾಣಗಳು ಹಿಂದುಳಿದಿರುವುದು ಮಾತ್ರವಲ್ಲ, ಶೇ.175ರಷ್ಟು ದಟ್ಟಣೆಯ ಹೊರತಾಗಿಯೂ ಹಳಿಗಳೂ ಸಿಂಗಲ್ ಲೈನ್ ಆಗಿಯೇ ಇದ್ದು, ಇದೀಗ ಸಾರ್ವಜನಿಕರಿಂದ ಡಬ್ಲಿಂಗ್ ಮಾಡಬೇಕೆಂಬ ಬೇಡಿಕೆ ಇದೆ. ಹೀಗಾಗಿ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿಯೋಗವು ಪತ್ರದಲ್ಲಿ ಕೋರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News