×
Ad

ಕೆಪಿಎಸ್ಸಿ ಲೋಪ | ಅನ್ಯಾಯ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಿಎಂಗೆ ನಾರಾಯಣಗೌಡ ಪತ್ರ

Update: 2025-02-27 20:35 IST

ಬೆಂಗಳೂರು : ಕೆಪಿಎಸ್ಸಿಯಿಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಅನ್ಯಾಯ ಸರಿಪಡಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.

ಗುರುವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬಹಿರಂಗ ಪತ್ರ ಬರೆದಿರುವ ಅವರು, 2024ರ ಡಿ.29ರಂದು ಕೆಪಿಎಸ್ಸಿ ನಡೆಸಿದ ಕೆಎಎಸ್ ಮರು ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕೊಡಲಾದ ಪ್ರಶ್ನೆಪತ್ರಿಕೆಗಳಲ್ಲಿ ಸುಮಾರು 54ಕ್ಕೂ ಹೆಚ್ಚು ಪ್ರಶ್ನೆಗಳು ತಪ್ಪಾಗಿವೆ. ಪ್ರಶ್ನೆ ಪತ್ರಿಕೆ ಗಳನ್ನು ಇಂಗ್ಲಿಷ್‌ ನಲ್ಲಿ ತಯಾರಿಸಿ, ಕನ್ನಡಕ್ಕೆ ಅನುವಾದ ಮಾಡಲಾಗಿದ್ದು, ವ್ಯಾಪಕವಾದ ದೋಷ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳು ಆಗಿರುವ ಅನ್ಯಾಯವನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಫೆ.24ರಂದು ಬೆಂಗಳೂರಿನ ಕೆಪಿಎಸ್ಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನೂ ನಡೆಸಿದೆ. ಪೊಲೀಸರು ಕರವೇ ನಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸುಮಾರು 70,000ಕ್ಕೂ ಹೆಚ್ಚು ಮಂದಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ನಮ್ಮನ್ನು ವಂಚಿಸುವ ಉದ್ದೇಶದಿಂದಲೇ ತಪ್ಪು ತಪ್ಪಾದ ಪ್ರಶ್ನೆ ಪತ್ರಿಕೆ ನೀಡಿ ಅನ್ಯಾಯವೆಸಗಲಾಗಿದೆ ಎಂಬ ಭಾವನೆ ಅವರಲ್ಲಿ ತೀವ್ರವಾಗಿ ಬೇರುಬಿಟ್ಟಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಇಂಥಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಂಕಟಕ್ಕೆ ಧ್ವನಿಯಾಗಿರುವ ಕರ್ನಾಟಕ ರಕ್ಷಣಾ ವೇದಿಕೆ ಸರಕಾರದೊಂದಿಗೆ ಸಂವಾದದ ಪ್ರಯತ್ನಗಳನ್ನು ನಡೆಸುತ್ತಿದೆ. ಕನ್ನಡಪರವಾದ ತಮ್ಮ ಕಾಳಜಿಯ ರಾಜಕಾರಣಕ್ಕೆ ಈ ಘಟನೆ ಕಪ್ಪುಚುಕ್ಕಿಯಾಗಿ ಉಳಿಯಬಾರದು ಎಂಬುದು ನನ್ನ ಕಾಳಜಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News