×
Ad

ಭೂಗಳ್ಳರ ಮೇಲೆ ಕ್ರಮ ಜರುಗಿಸಲು ಕಾಯ್ದೆ ತಿದ್ದುಪಡಿ, ಇದೇ ತಿಂಗಳ ಅಂತ್ಯಕ್ಕೆ ಜಾರಿ : ಕೃಷ್ಣಭೈರೇಗೌಡ

Update: 2025-08-13 20:58 IST

ಬೆಂಗಳೂರು, ಆ.13: ಸರಕಾರಿ ಜಮೀನು ಕಬಳಿಸುವ ಭೂಗಳ್ಳರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ತಿದ್ದುಪಡಿ ಮಾಡಿರುವ ಕಾಯ್ದೆಯು ಇದೇ(ಆಗಸ್ಟ್) ತಿಂಗಳ ಅಂತ್ಯಕ್ಕೆ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಬುಧವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದುವರೆಗೂ ಸರಕಾರಿ ಜಮೀನು ಕಬಳಿಸಿದವರು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದರು. ನ್ಯಾಯಾಲಯದಿಂದ ತಡೆಯಾಜ್ಞೆ ತರುವುದು ಸೇರಿದಂತೆ ಹಲವು ದಾರಿಗಳಿಂದ ನುಣುಚಿಕೊಳ್ಳುತ್ತಿದ್ದರು. ನೂತನ ಕಾಯ್ದೆಯಲ್ಲಿ ಹಲವಾರು ಕಠಿಣ ಕಾನೂನು ಕ್ರಮಗಳನ್ನು ಸೇರ್ಪಡೆ ಮಾಡಿದ್ದೇವೆ ಎಂದರು.

ಇನ್ನು ಮುಂದೆ ಯಾರೇ ಆಗಲಿ ಸರಕಾರಿ ಜಮೀನು ಕಬಳಿಸಿರುವುದು ಅಥವಾ ಕಬಳಿಸುವವರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಾಯ ಮಾಡಿದ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಜರುಗಿಸಲು ಹೊಸ ಕಾನೂನಿನಲ್ಲಿ ಅವಕಾಶವಿದೆ. ಸರಕಾರಿ ಜಮೀನು ಅಕ್ರಮವಾಗಿ ಕಬಳಿಸುವುದನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಕೆಲವು ಪ್ರಭಾವಿಗಳು ಸರಕಾರಿ ಜಮೀನನ್ನು ಭೂ ಕಬಳಿಕೆ ಮಾಡಿಕೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದರು. ಹೈಕೋರ್ಟ್ ಇಲ್ಲವೇ ಸುಪ್ರೀಂಕೋರ್ಟ್‍ಗೆ ಹೋಗಿ ತಡೆಯಾಜ್ಞೆ ತರುತ್ತಿದ್ದರು. ಜಮೀನು ಮಾಲಕ ಕಾನೂನು ಹೋರಾಟ ನಡೆಸಲು ಸಾಧ್ಯವಾಗದೆ ತನಗೆ ಅರ್ಧ ಪರಿಹಾರ ಸಿಕ್ಕರೆ ಸಾಕು ಎಂಬ ತೀರ್ಮಾನಕ್ಕೆ ಬರುತ್ತಿದ್ದ. ಈ ಎಲ್ಲ ಅಕ್ರಮಗಳನ್ನು ತಡೆಗಟ್ಟಲು ನಾವು ಹೊಸ ನಿಯಮವನ್ನು ರೂಪಿಸಿದ್ದೇವೆ ಎಂದು ಕೃಷ್ಣಭೈರೇಗೌಡ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News