ಕೆಎಸ್ಸಾರ್ಟಿಸಿ ವಿಶೇಷ ಪ್ರಯಾಣ ದರ ಹೆಚ್ಚಳ | ಇಪ್ಪತ್ತು ವರ್ಷಗಳಿಂದಲೂ ಜಾರಿ : ಕೆಎಸ್ಸಾರ್ಟಿಸಿ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.29: ವಿಶೇಷ ದಿನ/ಜಾತ್ರಾ/ಹಬ್ಬ ಹರಿದಿನಗಳ ರಜೆ ದಿನಗಳಂದು ಕೆಎಸ್ಸಾರ್ಟಿಸಿ ಬಸ್‍ಗಳ ವಿಶೇಷ ಸಾರಿಗೆಗಳಿಗೆ ಪ್ರಯಾಣ ದರಗಳನ್ನು ಹೆಚ್ಚಿಸಲು ಅವಕಾಶವಿದ್ದು, ದಸರಾ ಅವಧಿಯಲ್ಲಿ ಕಾರ್ಯಾಚರಣೆ ಮಾಡುವ ವಿಶೇಷ ಸಾರಿಗೆಗಳಿಗೆ ಪ್ರಯಾಣ ದರಗಳನ್ನು ಹೆಚ್ಚಿಸುವುದು ಇಪ್ಪತ್ತು ವರ್ಷಗಳಿಂದಲೂ ಜಾರಿಯಲ್ಲಿದೆ ಎಂದು ಸಂಸ್ಥೆ ಸ್ಪಷ್ಟಣೆ ನೀಡಿದೆ.
ಈ ವರ್ಷವು ದಸರಾ ಪ್ರಯುಕ್ತ ಸೆ.26ರಿಂದ ಅ.8ರ ವರೆಗೆ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ವಿಶೇಷ ಸಾರಿಗೆ ವಾಹನಗಳಾದ ವೇಗದೂತ ಬಸ್‍ಗಳಲ್ಲಿ 20ರೂ. ಹಾಗೂ ಪ್ರತಿಷ್ಠಿತ ಬಸ್‍ಗಳಲ್ಲಿ 30ರೂ. ದರವನ್ನು ಹೆಚ್ಚಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.
ಮೇಲ್ಕಂಡ ದಿನಗಳಂದು ವಿಶೇಷ ಸಾರಿಗೆಗಳನ್ನು ಏಕಮುಖ ಸಾರಿಗೆಗಳಾಗಿ ಆಚರಣೆ ಮಾಡಿ, ವಾಪಸ್ಸು ಬರುವಾಗ ಖಾಲಿ ಅಥವಾ ಕಡಿಮೆ ಪ್ರಯಾಣಿಕರಿಂದ ಕಾರ್ಯಾಚರಣೆ ಮಾಡಬೇಕಾಗಿದೆ. ಹೀಗಾಗಿ ವಿಶೇಷ ವಾಹನಗಳನ್ನು ಇತರೇ ವಿಭಾಗಗಳಿಂದ ಪಡೆದು ಈ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುವುದರಿಂದ ವೆಚ್ಚ ಹೆಚ್ಚಾಗಿರುವ ಕಾರಣ ಪ್ರಯಾಣ ದರಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ನಿಗಮವು ಪ್ರಕಟನೆಯಲ್ಲಿ ವಿವರಣೆ ನೀಡಿದೆ.