ಕೂಡಂಕುಳಂ ಅಣುವಿದ್ಯುತ್ ಸ್ಥಾವರದ ದತ್ತಾಂಶ ಸೋರಿಕೆ?
► ‘ವರ್ಲ್ಡ್ ಲೀಕ್ಸ್’ ರ‍್ಯಾನ್ ಸಮ್ ವೇರ್ ನಿಂದ ಡಾರ್ಕ್ವೆಬ್ ನಲ್ಲಿ ಬಹಿರಂಗ ► ಅಣುವಿದ್ಯುತ್ ಸ್ಥಾವರದ ಭಾಗಗಳ ನೀಲನಕ್ಷೆ, ಮಹತ್ವದ ಮಾಹಿತಿಗಳ ಸೋರಿಕೆ
Photo Credit: ndtv
ಬೆಂಗಳೂರು, ಜು. 15: ಭಾರತದ ಅತಿ ದೊಡ್ಡ ಅಣುವಿದ್ಯುತ್ ಸ್ಥಾವರವಾದ ಕೂಡಂಕುಳಂನ ದತ್ತಾಂಶ ಸೋರಿಕೆಯಾಗಿರುವುದಾಗಿ ವರದಿಯಾಗಿದೆ. ಈ ಅಣುವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದ ಕಡತಗಳ ಬೃಹತ್ ಸಂಗ್ರಹವೊಂದನ್ನು ರ‍್ಯಾನ್ ಸಮ್ವೇರ್ ಸಮೂಹ ‘ವರ್ಲ್ಡ್ ಲೀಕ್ಸ್’ ಡಾರ್ಕ್ ವೆಬ್ ನಲ್ಲಿ ಬಿಡುಗಡೆಗೊಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಕೂಡಂಕುಳಂ ಅಣುವಿದ್ಯುತ್ ಸ್ಥಾವರದ ಭಾಗಗಳ ನೀಲನಕ್ಷೆಗಳು ಹಾಗೂ ಪೂರೈಕೆದಾರರ ವಿವರಗಳನ್ನು ಈ ಕಡತಗಳು ಒಳಗೊಂಡಿವೆ ಎನ್ನಲಾಗಿದೆ.
ತಮಿಳುನಾಡಿನ ಕೂಡಂಕುಳಂ ಅಣುವಿದ್ಯುತ್ ಸ್ಥಾವರವು ಭಾರತದಲ್ಲಿರುವ ಏಳು ಅಣುವಿದ್ಯುತ್ ಸ್ಥಾವರಗಳಲ್ಲಿ ಅತಿ ದೊಡ್ಡದಾಗಿದೆ.
ಈ ಅಣುಸ್ಥಾವರದ ಗುತ್ತಿಗೆದಾರರಲ್ಲಿ ಒಬ್ಬರಾದ ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಈ ಕುರಿತು ಹೇಳಿಕೆಯೊಂದನ್ನು ನೀಡಿ, ಭಾರತೀಯ ದತ್ತಾಂಶ ಕೇಂದ್ರ ಸೇವಾದಾರ ಯೊಟ್ಟಾ ನಿರ್ವಹಿಸುತ್ತಿರುವ ಸರ್ವರ್ ನಲ್ಲಿದ್ದ ದತ್ತಾಂಶ ಭಾಗಶಃ ಸೋರಿಕೆಯಾಗಿರುವುದನ್ನು ಒಪ್ಪಿಕೊಂಡಿದೆ.
ಘಟನೆಯ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಅದು ಹೇಳಿದೆ. ಆದರೆ ಯಾವೆಲ್ಲ ದತ್ತಾಂಶಗಳು ಸೋರಿಕೆಯಾಗಿವೆ ಎಂಬ ಬಗ್ಗೆ ರಿಲಯನ್ಸ್ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ದತ್ತಾಂಶ ಸೋರಿಕೆಯು ಅಣುವಿದ್ಯುತ್ ಸ್ಥಾವರದ ಸುರಕ್ಷತೆಗೆ ಗಂಭೀರ ಅಪಾಯವನ್ನು ಉಂಟುಮಾಡಿದೆ ಎಂದು ಅಣುಶಕ್ತಿ ಭದ್ರತೆಯ ಪೂರ್ವಸಿದ್ಧತೆಗಾಗಿ ದೇಶಗಳನ್ನು ಸನ್ನದ್ಧಗೊಳಿಸುವ ಸಂಸ್ಥೆ ‘ಪರಮಾಣು ಬೆದರಿಕೆ ಉಪಕ್ರಮ’ದ ಹಿರಿಯ ನಿರ್ದೇಶಕ ನಿಕೋಲಾಸ್ ರೋಥ್ ಕಳವಳ ವ್ಯಕ್ತಪಡಿಸಿದ್ದಾರೆ.