×
Ad

ರಾಜ್ಯದಲ್ಲಿ ವೈಎಸ್ ಟಿ (YST) ತೆರಿಗೆ ಜಾರಿಗೆ ಬಂದಿದೆ: ಎಚ್.ಡಿ.ಕುಮಾರಸ್ವಾಮಿ ಆರೋಪ

Update: 2023-07-02 17:27 IST

ಫೈಲ್ ಚಿತ್ರ- ಕುಮಾರಸ್ವಾಮಿ 

ಬೆಂಗಳೂರು: 'ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಹೊಸದಾಗಿ ವೈಎಸ್ ಟಿ (YST) ತೆರಿಗೆ ಆರಂಭವಾಗಿದೆ' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. 

ಅವರು ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ರವಿವಾರ ಮಾಧ್ಯಮಗಳ ಜತೆ ಮಾತನಾಡಿದರು.

ವೈಎಸ್ ಟಿ ಎಂದರೆ ಏನು? ಸ್ವಲ್ಪ ಬಿಡಿಸಿ ಹೇಳಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ? ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ? ನೀವೂ ಪತ್ತೆ ಹಚ್ಚಿ'' ಎಂದರು.

ವರ್ಗಾವಣೆ ದಂಧೆ ಬಗ್ಗೆ ತಮ್ಮ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಹೇಳಿಕೆ ಬಗ್ಗೆ  ಪ್ರತಿಕ್ರಿಯಿಸಿದ ಅವರು, ನಾನು ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ. ನಾನು ನಿಮ್ಮ ಪಕ್ಷದ ಜತೆ ಸರಕಾರ ರಚನೆ ಮಾಡಿದ್ದಾಗ ನೀವೆಲ್ಲ ಏನೇನು ಮಾಡಿದಿರಿ ಎನ್ನುವುದು ಗೊತ್ತಿದೆ. ಪೊಗದಸ್ತಾದ ಇಲಾಖೆಗಳನ್ನು ಇಟ್ಟುಕೊಂಡಿದ್ದ ನಿಮ್ಮ ಮಂತ್ರಿಗಳು ಏನು ಮಾಡಿದರು? ಮುಖ್ಯಮಂತ್ರಿಯಾಗಿ ನಾನು ಯಾವೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೇ ಇರಲಿಲ್ಲ. ಎಲ್ಲ ದಂಧೆಗಳು ಯಾರ ಮೂಗಿನಡಿ ನಡೆಯುತ್ತಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಣ ಕೊಟ್ಟು ಪೋಸ್ಟ್ ಪಡೆಯಲು ಬಂದವರನ್ನು ನಾನು ದೂರ ಇಟ್ಟಿದ್ದೆ. ಬಿಡಿಎ ಮೇಲೆ ಬಂದು ಕೊರಲು ಬಂದ ಅಧಿಕಾರಿಗೆ ಹೊರಗಟ್ಟಿದ್ದೆ. ಯಲಹಂಕ ತಹಶಿಲ್ದಾರ್ ಹುದ್ದೆಗೆ ಒಂದೂವರೆ ಕೋಟಿ ಕೊಡ್ತೀವಿ ಅಂದವರನ್ನು ಆಚೆ ಇಟ್ಟಿದ್ದೆ. ಇದು ನಾನು ನಡೆಸಿದ ಆಡಳಿತ. ಈಗ ನೋಡಿದರೆ ವೈಎಸ್ ಟಿ ತೆರಿಗೆ ಅಂತ ಇವರ ಶುರು ಮಾಡಿಕೊಂಡಿದ್ದಾರೆ ಎಂದು ಕಟುವಾಗಿ ಟೀಕೆ ಮಾಡಿದರು.

ವಸೂಲಿ ಮಾಡಿ ವರ್ಗಾವಣೆ ಮಾಡುವ ದಂಧೆ ಮಾಡದೇ ವಸೂಲಿ ಶುರುವಾಗಿದೆ. ಅಧಿಕಾರಿಗಳನ್ನು ಮನೆಯಲ್ಲಿ ಕೂರಿಸಿಕೊಂಡು ರಾತ್ರಿ ಒಂದು ಗಂಟೆಯವರೆಗೆ ಸಭೆ ಮಾಡ್ತಾ ಇದ್ದಾರಲ್ಲಾ.. ಅದು ಏತಕ್ಕೆ? ಸರಕಾರಿ ಕಚೇರಿ ಏಕೆ ಸಭೆಗಳನ್ನು ನಡೆಸಲ್ಲ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

''ಒಂದು ಸರಕಾರ, ಹತ್ತಾರು ಮುಖ್ಯಮಂತ್ರಿಗಳು''

ಕಾಂಗ್ರೆಸ್ ಸರಕಾರದಲ್ಲಿ ಈಗಾಗಲೇ ಆಡಳಿತ ಹಳಿತಪ್ಪಿದೆ. 'ಒಂದು ಸರಕಾರ, ಹತ್ತಾರು ಮುಖ್ಯಮಂತ್ರಿಗಳು' ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಅವರು ಒಬ್ಬರೇ ಮುಖ್ಯಮಂತ್ರಿ ಅಲ್ಲ. ಇಲಾಖೆಗೊಬ್ಬ ಮುಖ್ಯಮಂತ್ರಿ ಇದ್ದಾರೆ. ಒಬ್ಬೊಬ್ಬರು ಮುಖ್ಯಮಂತ್ರಿಯಂತೆ ಹೇಳಿಕೆ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News