×
Ad

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುವ ಭ್ರಮೆ ನನಗಿಲ್ಲ: ಲಕ್ಷ್ಮಣ ಸವದಿ

Update: 2025-10-20 18:59 IST

ಚಿಕ್ಕೋಡಿ, ಅ.20: ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುವ ಭ್ರಮೆ ನನಗಿಲ್ಲ. ನಾನು ಎಲ್ಲಿಯೂ ಈ ಸಂಬಂಧ ಹೇಳಿಕೆಯನ್ನು ನೀಡಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಸೋಮವಾರ ಅಥಣಿಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಸಹಕಾರಿ ರಂಗದಲ್ಲಿ ಉಪಾಧ್ಯಕ್ಷ, ಅಧ್ಯಕ್ಷ ಹಾಗೂ ಅಪೇಕ್ಸ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಸಹಕಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

30 ವರ್ಷಗಳಿಂದ ನಿರಂತರವಾಗಿ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ನಾನು, ರಾಜ್ಯದ ಉಪ ಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ಈಗ ಪುನಃ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‍ನ ಅಧ್ಯಕ್ಷನಾಗಬೇಕು ಎಂಬ ಭ್ರಮೆ ನನಗಿಲ್ಲ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಡಿಸಿಸಿ ಬ್ಯಾಂಕ್‍ನ ಚುನಾವಣೆ ನಿನ್ನೆಯಷ್ಟೆ ಮುಗಿದಿದೆ. ಇನ್ನೂ ನಾಲ್ಕು ಕ್ಷೇತ್ರಗಳ ಫಲಿತಾಂಶ ಬರುವುದು ಬಾಕಿಯಿದೆ. ಆನಂತರ, ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ. ರಾಜಕಾರಣ ನಿಂತ ನೀರಲ್ಲ, ಇಲ್ಲಿ ಯಾರೂ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ. ಸಂದರ್ಭ ಬಂದಾಗ ಅದರ ಬಗ್ಗೆ ಮಾತನಾಡೋಣ ಎಂದು ಲಕ್ಷ್ಮಣ ಸವದಿ ಹೇಳಿದರು.

ಡಿಸೆಂಬರ್ ತಿಂಗಳಲ್ಲಿ ನನಗೆ ಶುಕ್ರದೆಸೆ ಪ್ರಾರಂಭವಾಗುತ್ತದೆ. ಅದು ಯಾವ ರೀತಿ ಇರುತ್ತದೆ ಎಂದು ಹೇಳುವುದಿಲ್ಲ. ರಾಜ್ಯಕ್ಕೆ, ದೇಶಕ್ಕೂ ಶುಕ್ರದೆಸೆ ಬರುತ್ತದೆ. ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News