×
Ad

ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ

Update: 2023-12-19 20:55 IST

ಹೊಸದಿಲ್ಲಿ: ಕೇಂದ್ರ ಸರಕಾರದ ಪುರಸ್ಕೃತ ಯೋಜನೆಗಳಾದ ಸಖಿ ಒನ್ ಸ್ಟಾಪ್ ಸೆಂಟರ್, ಸಖಿ ನಿವಾಸ್, ಶಕ್ತಿ ಸದನ್, ಉಜ್ವಲ್ ಹಾಗೂ ಸ್ವಾಧಾರ ಗೃಹ ಯೋಜನೆಗಳ ಅನುದಾನ ಬಿಡುಗಡೆಗೊಳಿಸುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯವರನ್ನು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ ಮಾಡಿದರು.

ಮಂಗಳವಾರ ಹೊಸದಿಲ್ಲಿಯಲ್ಲಿರುವ ಸಂಸತ್ ಭವನದಲ್ಲಿ ಸ್ಮೃತಿ ಇರಾನಿಯನ್ನು ಭೇಟಿ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆ ಕುರಿತಂತೆ ಸುದೀರ್ಘವಾಗಿ ಮಾತುಕತೆ ನಡೆಸಿದರು.

ಐಸಿಡಿಎಸ್ ಯೋಜನೆಯಡಿ ಅಂಗನವಾಡಿಗಳಿಗೆ ನೀಡಬೇಕಿರುವ ಅಕ್ಕಿ ಮತ್ತು ಗೋಧಿ ಕಳೆದ ಒಂದು ವರ್ಷದಿಂದ ಬಿಡುಗಡೆಯಾಗದೆ ಬಾಕಿ ಉಳಿದಿರುವ ಕುರಿತು ಕೇಂದ್ರ ಸಚಿವರ ಗಮನ ಸೆಳೆದ ಲಕ್ಷ್ಮಿ ಹೆಬ್ಬಾಳ್ಕರ್, ಕೂಡಲೇ ಬಿಡುಗಡೆಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಕೋರಿದರು.

ಜೊತೆಗೆ, ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ 51 ತಾಲೂಕುಗಳಿಗೆ ಶಿಶು ಅಭಿವೃದ್ಧಿ ಕಚೇರಿ ಮಂಜೂರು ಮಾಡುವಂತೆ ಮತ್ತು ಸಿಬ್ಬಂದಿ ನೀಡುವಂತೆ ಹಾಗೂ ಸಕ್ಷಮ್ ಯೋಜನೆಯಡಿಯ ಅಂಗನವಾಡಿ ಕೇಂದ್ರಗಳನ್ನು ಸ್ಮಾರ್ಟ್ ಕ್ಲಾಸ್ ರೂಂ ಆಗಿ ಪರಿವರ್ತಿಸಲು ಸಹ ಅವರು ಮನವಿ ಮಾಡಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸ್ಮೃತಿ ಇರಾನಿ, ತಕ್ಷಣ ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಮತ್ತು ಅನುದಾನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜೆ.ಸಿ.ಪ್ರಕಾಶ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News