×
Ad

ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ, ಕೂಡಲೇ ಕೈಬಿಡಿ: ಆರ್. ಅಶೋಕ್

Update: 2025-09-16 20:38 IST

ಆರ್. ಅಶೋಕ್

ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ ಭೂ ಸ್ವಾಧೀನ ಮಾಡುತ್ತಿರುವುದು ಅಕ್ರಮವಾಗಿದೆ. ಇದನ್ನು ರಾಜ್ಯ ಸರಕಾರ ಕೂಡಲೇ ಕೈಬಿಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಮಂಗಳವಾರ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೆಸರಲ್ಲಿ ಕಾಂಗ್ರೆಸ್ ಸರಕಾರ ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ 9,600 ಎಕರೆ ಜಮೀನನ್ನು ಸ್ವಾಧೀನ ಮಾಡುತ್ತಿದೆ. ಈ ಪೈಕಿ 6,500 ಎಕರೆ ಕೃಷಿ ಭೂಮಿ ಇದೆ. ಇಲ್ಲಿ 10 ಲಕ್ಷಕ್ಕೂ ಅಧಿಕ ತೆಂಗು ಹಾಗೂ ಮಾವಿನ ಮರಗಳಿವೆ ಎಂದರು.

ಪ್ರತಿದಿನ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಕೆಎಂಎಫ್‍ಗೆ ತಲುಪುತ್ತಿದೆ. 3 ಸಾವಿರಕ್ಕೂ ಅಧಿಕ ರೈತರು ಹಾಗೂ ಕಾರ್ಮಿಕರು ಕೃಷಿಯನ್ನು ನಂಬಿಕೊಂಡಿದ್ದಾರೆ. ಇಷ್ಟು ಫಲವತ್ತಾದ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ನಿವೇಶನಗಳನ್ನು ನೀಡಲಾಗುತ್ತಿದೆ. ಹೌಸಿಂಗ್ ಬೋರ್ಡ್‍ನಿಂದ 560 ಎಕರೆ ಜಮೀನು ಸ್ವಾಧೀನಕ್ಕೆ ಪಡೆದು ಸೈಟುಗಳನ್ನು ನಿರ್ಮಿಸಿದೆ. ಆದರೂ ಇಲ್ಲಿ ಯಾರೂ ಮನೆಗಳನ್ನು ನಿರ್ಮಿಸಿಲ್ಲ ಎಂದರು.

ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆಗಳಲ್ಲೇ ಖಾಲಿ ಇದೆ. ಇಷ್ಟು ಖಾಲಿ ಇರುವಾಗ ಫಲವತ್ತಾದ ಭೂಮಿಯನ್ನು ಸ್ವಾಧೀನ ಮಾಡಿಕೊಂಡರೆ ಅದು ರೈತರಿಗೆ ಮಾಡುವ ವಂಚನೆ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸ್ವಾಧೀನ ಬೇಡವೆಂದು ರೈತರಿಗೆ ಜಮೀನು ಬಿಟ್ಟಿದ್ದರು. ಈಗ ಕಾಂಗ್ರೆಸ್ ಸರಕಾರ ಕುತಂತ್ರ ಮಾಡಿ ಜಮೀನು ಲೂಟಿ ಮಾಡಿ ರಿಯಲ್ ಎಸ್ಟೇಟ್‍ನಿಂದ ಹಣ ಹೊಡೆಯಲು ಪ್ಲಾನ್ ಮಾಡಿದೆ. ರಾಮನಗರದಲ್ಲಿ ಸೈಟು ಬೇಕೆಂದು ಯಾರು ಕೇಳಿದ್ದಾರೆ? ಮಾಡಿರುವ ಸೈಟುಗಳೇ ಖಾಲಿ ಇದೆ. ಇದು ಅಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ಡಿನೋಟಿಫಿಕೇಶನ್ ಮಾಡದೆಯೇ ಹಾಗೆಯೇ ಬಿಟ್ಟುಬಿಡಬೇಕು. ಯಾವುದೇ ಸವಲತ್ತು ಬೇಡವೆಂದು ರೈತರು ಹೇಳಿದ್ದಾರೆ. ಬಹುತೇಕ ರೈತರು ಹೀಗೆಯೇ ಇರಲಿ ಎಂದು ಹೇಳಿದ್ದಾರೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ರೈತರ ಮಾತಿಗೆ ಬೆಲೆ ನೀಡಬೇಕು. ಮುಂದೆ ನಮ್ಮ ಸರಕಾರ ಬಂದಾಗ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News