×
Ad

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಭೂ ಒತ್ತುವರಿ ಆರೋಪ; ಆರೋಪಿಗಳನ್ನು ಮಂಪರು ಪರೀಕ್ಷೆ ಮಾಡಿದರೆ ಸತ್ಯ ಹೊರಬರಲಿದೆ: ಹೈಕೋರ್ಟ್

Update: 2025-03-18 11:26 IST

ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಸದಸ್ಯರು ಬಿಡದಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾರ ಅನುಮತಿ ಪಡೆದು ವಿಶೇಷ ತನಿಖಾ ತಂಡ ರಚನೆ ಮಾಡಿದೆ? ಆರೋಪಿಗಳನ್ನ ಮಂಪರು ಪರೀಕ್ಷೆ ಒಳಪಡಿಸಿದರೆ ಸತ್ಯ ಹೊರಬರಲಿದೆ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಭೂ ಒತ್ತುವರಿ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್‌ ಆದೇಶವನ್ನ ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್‌ ಆರ್‌ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ಟಿ.ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಎಸ್‌ಐಟಿ ರಚಿಸಬೇಕು ಎಂದು ನ್ಯಾಯಾಲಯ ಹೇಳಿತ್ತೇ? ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ರಾಜೇಂದ್ರ ಕಠಾರಿಯಾ ಎಸ್‌ಐಟಿ ರಚಿಸಿದ್ದಾರೆ. ಕಂದಾಯ ಇಲಾಖೆಯು ಎಸ್‌ಐಟಿ ರಚಿಸಲು ಅಷ್ಟು ಶಕ್ತಿಶಾಲಿಯೇ? ರಾಜ್ಯ ಸರ್ಕಾರವು ಸಂವಿಧಾನಕ್ಕಿಂತ ಮಿಗಿಲಾಗಿದೆಯೇ? 14 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಉಳಿದ 71 ಎಕರೆ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಬೇಕಿದೆ. ಯಾವ ರೀತಿಯಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ? ಎಷ್ಟು ಎಕರೆ ತೆರವು ಮಾಡಲಾಗಿದೆ? ತಡೆಯಾಜ್ಞೆ ಪಡೆಯಲು ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಕಠಾರಿಯಾ ವಿರುದ್ಧ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಲಾಗುವುದು. ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಬೇಕು, ಇಲ್ಲವೇ ಆರೋಪಿಗಳನ್ನು ಜೈಲಿಗೆ ಹಾಕಬೇಕು ಅಷ್ಟೆ, ಎಲ್ಲಾ ಆರೋಪಿಗಳನ್ನು ಬ್ರೈನ್‌ ಮ್ಯಾಪಿಂಗ್‌ ಟೆಸ್ಟ್‌ಗೆ ಹಾಕಲಾಗುವುದು. ಆಗ ಸತ್ಯ ಹೊರಬರುತ್ತದೆ. ಎಸ್‌ಐಟಿ ರಚಿಸಲು ಸರ್ಕಾರಕ್ಕೆ ಅಧಿಕಾರ ನೀಡಿದವರು ಯಾರು? ಹಾಗಾದರೆ ರಾಜ್ಯ ಸರ್ಕಾರವು ಕಾನೂನಿಗಿಂತ ಮೇಲಿದೆಯೇ?” ಎಂದು ನ್ಯಾಯಾಲಯವು ಕಿಡಿಕಾರಿತು.

ಸಮಾಜ ಪರಿವರ್ತನಾ ಸಮುದಾಯ ಪರ ಹಿರಿಯ ವಕೀಲ ಎಸ್‌ ಬಸವರಾಜು ವಾದ ಮಂಡಿಸಿ, ಪ್ರಬಲರಲ್ಲದವರು ಒತ್ತುವರಿ ಮಾಡಿದ್ದ 14 ಎಕರೆಯನ್ನು ತೆರವುಗೊಳಿಸಲಾಗಿದೆ. ಬಲಿಶಾಲಿಗಳು ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವು ಮಾಡಿಸಲಾಗಿಲ್ಲ. ಬಲಶಾಲಿಗಳು ಎಸ್‌ಐಟಿ ರಚನೆಯನ್ನು ಪ್ರಶ್ನಿಸಿ, ತಡೆಯಾಜ್ಞೆ ಪಡೆಯಲು ಅನುಕೂಲ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ತನ್ನ ಜಮೀನನ್ನು ವಶಕ್ಕೆ ಪಡೆಯಲು ನಾವು ಹೋರಾಟ ಮಾಡುತ್ತಿದ್ದೇವೆ. ಆರೋಪಿಗಳ ಹೆಸರನ್ನು ಕೇಳಿದ ತಕ್ಷಣ ಸರ್ಕಾರ ಬೆಚ್ಚುತ್ತಿದೆ. ಆರೋಪಿಗಳ ಜೊತೆ ಸರ್ಕಾರವೂ ಕೈಜೋಡಿಸಿದೆ. ಇಲ್ಲಿ ಅಪ್ರಾಮಾಣಿಕತೆ ಎದ್ದು ಕಾಣುತ್ತಿದೆ. ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಲಾಗುತ್ತಿದೆ. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ಎಂದು ವಾದ ಮಂಡಿಸಿದರು.

ಈ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ ಎಂ. ರೋಣ್‌, ಒತ್ತುವರಿ ಮಾಡಿರುವ ಸರ್ಕಾರದ ಜಮೀನನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಕೆರೆಗೆ ಸಂಬಂಧಿಸಿದ 6 ಎಕರೆ 20 ಗಂಟೆ ತೆರವು ಮಾಡಲಾಗಿದೆ. 11 ಎಕರೆ 20 ಗುಂಟೆಯನ್ನು ಪತ್ತೆ ಮಾಡಿದ್ದೇವೆ. ಐಜಿಪಿ ಮತ್ತು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒಳಗೊಂಡ ಎಸ್‌ಐಟಿ ರಚಿಸಲಾಗಿದೆ. ಎಸ್‌ಐಟಿ ರಚಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಕಾನೂನು ಜಾರಿಗೊಳಿಸಲು ಎಸ್‌ಐಟಿ ರಚಿಸಲಾಗಿದೆ. 18 ಎಕರೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಅಸಲಿ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಬಳಿಕ ಹೈಕೋರ್ಟ್ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಎಸ್‌ಐಟಿ ರಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ಬಗ್ಗೆ ವಿವರಣೆ ನೀಡಲು ಮುಂದಿನ ವಿಚಾರಣೆಗೆ ರಾಜೇಂದ್ರ ಕಠಾರಿಯಾ ಖುದ್ದು ಹಾಜರಾಗಲು ಸೂಚನೆ ನೀಡಿದೆ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಅರೋಪಿಗಳ ವಿರುದ್ಧ ಮುಂದುವರಿಯಲು ದಾಖಲೆಗಳು ಇವೆ. ಆರೋಪ ನಿಗದಿಗೂ ಮುನ್ನ ವಾದ ಆಲಿಸುವ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು ಮಾರ್ಚ್‌ 19ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News